![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಕೊಪ್ಪಳ (Koppala): ಇತಿಹಾಸ ಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮುಕ್ತ ಗಾಳಿಪಟ ಹಾರಾಟ ಸ್ಪರ್ಧೆ ಆಯೋಜಿಸಲಾಗಿದ್ದು, ದೊಡ್ಡಬಳ್ಳಾಪುರ ಕಲಾ ಸಂಘದ ಬಣ್ಣಬಣ್ಣದ ಗಾಳಿಪಟಗಳು ಬಾನಂಗಳದ ಎತ್ತರಕ್ಕೆ ಹಾರಾಡಿದವು.
ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕೊಪ್ಪಳ, ಕೈಗಾರಿಕೆ ವಾಣಿಜ್ಯೋದ್ಯಮಿಗಳ ಸಹಯೋಗದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ ಕ್ರೀಡಾ ಉತ್ಸವದ ಕಾರ್ಯಕ್ರಮದ ಅಂಗವಾಗಿ ಮುಕ್ತ ಗಾಳಿಪಟ ಹಾರಾಟ ಸ್ಪರ್ಧೆ ನಡೆಯಿತು.
ದೊಡ್ಡಬಳ್ಳಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಅನ್ಯ ರಾಜ್ಯಗಳಾದ ಒಡಿಶಾ, ಹರಿಯಾಣ, ಕೇರಳ, ಅಸ್ಸಾಂ ಸೇರಿ ಅನೇಕ ತಂಡಗಳು ಆಗಮಿಸಿದ್ದವು.
ಬೃಹದಾಕಾರದ ಗಾಳಿಪಟಗಳು ಆಗಸದೆತ್ತರಕ್ಕೆ ಹಾರುತ್ತಿದ್ದಂತೆ, ನೆರೆದಿದ್ದ ಮಕ್ಕಳು, ಪೋಷಕರು, ವೃದ್ಧರು, ಜಾತ್ರಾ ಮಹೋತ್ಸವಕ್ಕೆ ಬಂದಂತಹ ಭಕ್ತರು ತಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.
ಕೊಪ್ಪಳ ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವದಲ್ಲಿ ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಸದಸ್ಯರಾದ ಎಸ್.ಮುನಿರಾಜ್, ಪ್ರಕಾಶ್ ಗಾಳಿಪಟ, ಕೆ.ಮಹೇಶ್, ಮಂಜುನಾಥ್ ಭಾಗವಹಿಸಿದ್ದರು.
ಇವರ ಸಾಲು ಪಟ, ಡ್ರ್ಯಾಗನ್ ಪಟ, ಅಕ್ಟೋಪಸ್, ಸ್ಟಂಟ್ ಕೈಟ್, ಹಾವು, ಹುಲಿ, ದೊಡ್ಡ ರಿಂಗ್ ಪಟಗಳು ಜಾತ್ರೆ ಅಂಗವಾಗಿ ಆಯೋಜಿಸಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಗಮನ ಸೆಳೆದವು.