Site icon Harithalekhani

ಕಣ್ಣೀರಿಡುತ್ತಲೇ ಮಹಾಕುಂಭ ಮೇಳ ತೊರೆಯುವುದಾಗಿ ಘೋಷಿಸಿದ ಸಾಧ್ವಿ ಹರ್ಷಾ ರಿಚಾರಿಯಾ..!| Video Harsha Richaria

Sadhvi Harsha Richaria tearfully announced her departure from the Mahakumbha Mela

Sadhvi Harsha Richaria tearfully announced her departure from the Mahakumbha Mela

ಪ್ರಯಾಗರಾಜ್: 2025 ರ ಮಹಾಕುಂಭ ಮೇಳದಲ್ಲಿ ತನ್ನ ವೇಷಭೂಷಣದಿಂದ ಗಮನ ಸೆಳೆದಿದ್ದ ಸಾಧ್ವಿ ಹರ್ಷಾ ರಿಚಾರಿಯಾ (Harsha Richaria) ಅವರು ಕಣ್ಣೀರಿಟ್ಟಿದ್ದು, ಕುಂಭಮೇಳವನ್ನು ಅರ್ಧದಲ್ಲೇ ತೊರೆಯುವುದಾಗಿ ಘೋಷಿಸಿದ್ದಾರೆ.

ಸಾಧ್ವಿ ಹರ್ಷಾ ರಿಚಾರಿಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್‌ಗಳು ಹಾಗೂ ನೆಗೆಟಿವ್ ಕಮೆಂಟ್‌ಗಳಿಂದಾಗಿ ಅತ್ಯಂತ ಇರುಸು ಮುರಿಸಿಗೆ ಒಳಪಟ್ಟಿದ್ದಾರೆ.

ಇದರಿಂದ ಬೇಸತ್ತಿರುವ ಅವರು ಕುಂಭಮೇಳದಿಂದ ನಿರ್ಗಮಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಟ್ರೋಲರ್‌ಗಳ ಟೀಕೆಗಳಿಂದಾಗಿ ಇಲ್ಲಿಂದ ಹಿಂದಿರುಗಬೇಕಾಗಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಬಿಕ್ಕಿ ಬಿಕ್ಕಿ ಅಳುವುದು ಕಂಡುಬಂದಿದೆ.

ಟ್ರೋಲಿಗರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ನಾಚಿಕೆಯಾಗಬೇಕು ಅವರಿಗೆ, ನನ್ನನ್ನು ಕುಂಭಮೇಳದಲ್ಲಿ ಇರಲು ಬಿಡಲಿಲ್ಲ. ನನ್ನದು ಏನೂ ತಪ್ಪಿಲ್ಲದಿದ್ದರೂ ನನ್ನ ಮೇಲೆ ಟೀಕೆ ಮಾಡಿದರು.

ಈಗ ನನಗೆ ಇಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಜೀವನದಲ್ಲೇ ಒಮ್ಮೆ ಬರುವ ಮಹಾಕುಂಭ ಮೇಳವನ್ನು ನನ್ನಿಂದ ಕಸಿದುಕೊಂಡಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸನಾತನ ಸಂಸ್ಥೆಗೆ ಸೇರಲು ಎಲ್ಲವನ್ನೂ ತ್ಯಾಗ ಮಾಡಬೇಕೇ? ನಾನು ಸಾದ್ವಿ ಸಂತ ಅಥವಾ ಸನ್ಯಾಸಿ ಎಂದೂ ಹೇಳಿಲ್ಲ. ನನಗೆ ದೇವರನ್ನು ಪೂಜಿಸುವುದರಲ್ಲಿ ಒಳ್ಳೆಯ ಅನುಭವ ಸಿಗುತ್ತದೆ. ಆದರೆ ನನ್ನ ಮದುವೆ ಮತ್ತು ಮಕ್ಕಳು ಟ್ರೋಲಿಗರಿಗೆ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ.

ವೃತ್ತಿಯಿಂದ ವಿರಾಮ ತೆಗೆದುಕೊಂಡು ಧರ್ಮದ ಹಾದಿ ಹಿಡಿಯಲು ನಿರ್ಧರಿಸಿದ್ದೇನೆ. ಪಾಶ್ಚಿಮಾತ್ಯ ಸಂಸ್ಕೃತಿ ಬಿಟ್ಟು ಸನಾತನ ಸಂಸ್ಕೃತಿಗೆ ಬರುವುದು ಅಪರಾಧವೇ ಎಂದು ಪ್ರಶ್ನಿಸಿದರು.

ಈಗ ನಾನು ಇಲ್ಲಿಂದ ಎರಡು-ಮೂರು ದಿನಗಳಲ್ಲಿ ಹೊರಡಬೇಕಾಗಿದೆ. ನಾನು ಒಂದು ತಿಂಗಳ ಕಾಲ ಮಹಾಕುಂಭಕ್ಕೆ ಬಂದಿದ್ದೆ. ಆದರೆ ನನಗೆ ಇಲ್ಲಿ ತುಂಬಾ ಅವಮಾನವಾಗಿದೆ.

ಈಗ ಇಲ್ಲಿಂದ ನಾನು ಉತ್ತರಾಖಂಡಕ್ಕೆ ಹಿಂತಿರುಗುತ್ತೇನೆ. ಅಲ್ಲಿ ನನ್ನ ಮನೆಯೂ ಇದೆ ಎಂದು ತಿಳಿಸಿದರು.

Exit mobile version