ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದಲಿತ ಸಮುದಾಯದ ಅಧಿಕಾರಿಗಳನ್ನ ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ದಾಖಲೆ ಇಲ್ಲದೆ ಆರೋಪ ಮಾಡಿ ಮಾನಸಿಕವಾಗಿ ಕಿರುಕುಳ ನೀಡುವುದಲ್ಲದೆ, ವರ್ಗಾವಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ದಲಿತ ಮುಖಂಡ ಮಾ.ಮುನಿರಾಜು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಎಸ್.ಸಿ/ಎಸ್.ಟಿ ಜಂಟಿ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಆರ್.ಟಿ.ಐ ಕಾರ್ಯಕರ್ತರ ಸೋಗಿನಲ್ಲಿ ಕೆಲ ಭ್ರಷ್ಟರು ಯಾವುದೇ ಕಳಂಕ ಇಲ್ಲದ ತಾಲ್ಲೂಕಿಗೆ ಕಳಂಕ ಮೆತ್ತಲು ಹೊರಟಿದ್ದಾರೆ.
ಕಾನೂನು ತೊಡಕುಗಳನ್ನ ಸರಿಪಡಿಸಲು ಹೋರಾಟ ಮಾಡಲಿ, ವಾಸ್ತಾಂಶ ತಿಳಿಯದೆ ದಾಖಲೆ ಇಲ್ಲದೆ ಸುಖಾಸುಮ್ಮನೆ ರಾಜ್ಯಪಾಲರಿಗೆ ದೂರು ನೀಡುವುದರ ಮೂಲಕ ಮಾನಸಿಕವಾಗಿ ನೋವನ್ನುಂಟು ಮಾಡಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ದಲಿತ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಕಾನೂನು ಹೋರಾಟ ಮಾಡಲಿ, ಬ್ಲಾಕ್ ಮೇಲ್ ಮಾಡಿ ಹಣವಸೂಲಿ ಮಾಡುವುದನ್ನ ಬಿಡಬೇಕು ಎಂದರು.
ಮುಖಂಡ ಜಿ.ಲಕ್ಷ್ಮೀಪತಿ, ಆದಿತ್ಯ ನಾಗೇಶ್ ಮಾತನಾಡಿ, ಕನಕಪುರ ಮೂಲದ ಆರ್.ಟಿ. ಐ ಕಾರ್ಯಕರ್ತನ ಸೋಗಿನಲ್ಲಿ ದಲಿತ ಮಹಿಳಾ ಅಧಿಕಾರಿಗಳಿಗೆ ಇಲ್ಲ ಸಲ್ಲದ ಕಿರುಕುಳ ನೀಡುತ್ತಿದ್ದಾರೆ. ಪ್ರಚಾರದ ಗೀಳಿನಿಂದ ಇಲ್ಲಸಲ್ಲದ ಆರೋಪ ಮಾಡಿದ್ದಾರೆ.
ಹುಲಿಕುಂಟೆ ಸರ್ವೆ ಜಮೀನು ಆದೇಶದ ವಿಚಾರದಲ್ಲಿ ಖಾಯಂ ಸಾಗುವಳಿ ಬಳಿಕ ಮಾಲೀಕರು ಮಾರಾಟ ಮಾಡಿದ ಮೇಲೆ ಖರೀದಿದಾರು ಪಹಣಿ, ಮ್ಯುಟೇಷನ್ ಮಾಡಿಸಿಕೊಂಡಿರಲಿಲ್ಲ.
ಸುಖಾಸುಮ್ಮನೆ ದಲಿತ ಅಧಿಕಾರಿಗಳ ಮೇಲೆ ಆರೋಪ ಮಾಡಿರುವ ವ್ಯಕ್ತಿ ಮೂರು ದಿನಗಳಲ್ಲಿ ಬೇಷರತ್ ಆಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಹೋರಾಟ ಸಮಿತಿಯಿಂದ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಮೋಹನ್, ಮುಖಂಡರಾದ ಪ್ರೇಮ್ ಕುಮಾರ್, ಗೋಪಾಲ್ ನಾಯಕ್, ಅಪ್ಪಿ ವೆಂಕಟೇಶ್, ಮಂಜುನಾಥ್, ಕೃಷ್ಣ ನಾಯಕ್, ಮಾರಪ್ಪ, ಕೊಡಿಗೇಹಳ್ಳಿ ವೆಂಕಟೇಶ್ ಮತ್ತಿತರರಿದ್ದರು.