ದೊಡ್ಡಬಳ್ಳಾಪುರ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗ್ರಾಮ ಒನ್ (Grama one) ಅಗಿದ್ದು, ಸರ್ಕಾರದ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ತಲುಪಿಸುವ ದೇಸೆಯಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಾಮ್ ಒನ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ಈ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿ ನಾಗರಿಕರು / ಹಿರಿಯ ನಾಗರಿಕರು / ಮಹಿಳೆಯರು, ವಿಶೇಷಚೇತನರು ತಮ್ಮ ಗ್ರಾಮದಲ್ಲಿಯೇ ಸರ್ಕಾರದ ನಾಗರಿಕ ಸೇವೆಗಳನ್ನು ಪಡೆಯಬಹುದು.
ಆದರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಕಲಿ ಗ್ರಾಮ ಒನ್ ಕೇಂದ್ರಗಳ ಹಾವಳಿ ಆರಂಭವಾಗಿದ್ದು, ಲಕ್ಷಾಂತರ ರೂ ಬಂಡವಾಳ ಹೂಡಿ ಗ್ರಾಮ ಒನ್ ಕೇಂದ್ರ ತೆರೆದಿರುವ ಯುವಕ, ಯುವತಿಯರನ್ನು ಸಂಕಷ್ಟಕ್ಕೆ ದೂಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೆಲ ಸೈಬರ್ ಸೆಂಟರ್ ಗಳು ಹಳದಿ ಬಣ್ಣ ಬಳೆದುಕೊಂಡು ಗ್ರಾಮ ಒನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿ ಗ್ರಾಹಕರನ್ನು ವಂಚಿಸುತ್ತಿವೆ.
ಈ ಕೇಂದ್ರಗಳಲ್ಲಿ ಐಕೆವೈಸಿ ಹೊರತು ಪಡಿಸಿ ಇತರೆ ಎಲ್ಲಾ ಗ್ರಾಮ ಒನ್ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೆ ಇತರೆ ಗ್ರಾಮ ಒನ್ ಐಡಿ ಶೇರ್ ಮಾಡಿಕೊಂಡು ಬಳಸುವ ಮೂಲಕ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ.
ಇನ್ನೂ ಈ ಕುರಿತು ಕ್ರಮ ವಹಿಸಬೇಕಾದ ಗ್ರಾಮ ಒನ್ ಅಧಿಕಾರಿಗಳು, ತಾಲೂಕು ಆಡಳಿತ, ಗ್ರಾಮಪಂಚಾಯಿತಿಗಳು ಕೈಕಟ್ಟಿ ಕುಳಿತಿದ್ದು, ಕೆಲ ಗ್ರಾಮ ಪಂಚಾಯಿತಿ ಪಿಡಿಒಗಳು, ಬಿಲ್ ಕಲೆಕ್ಟರ್, ಕಾರ್ಯದರ್ಶಿಗಳು ಕಮಿಷನ್ ಆಸೆಗೆ ಮೌನಕ್ಕೆ ಶರಣಾಗುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಇದರಿಂದಾಗಿ ಲಕ್ಷಾಂತರ ರೂ ಹಣ ಹೂಡಿಕೆ ಮಾಡಿರುವ ನಿರುದ್ಯೋಗಿ ಯುವಕರು ಗ್ರಾಮ ಒನ್ ಕೇಂದ್ರಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ.
ಕೂಡಲೇ ಅಧಿಕಾರಿಗಳು ಹೆಚ್ಚೆತ್ತು, ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ನಕಲಿ ಗ್ರಾಮ ಒನ್ ಕೇಂದ್ರಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.