ದೊಡ್ಡಬಳ್ಳಾಪುರ (Doddaballapura): ಮನೆಗೆ ತೆರಳಲು ಆಟೋ ಹತ್ತಿದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೋಚಿದ್ದ ಖತರ್ನಾಕ್ ಜೋಡಿಯನ್ನು ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೂಬಗೆರೆ ಪೇಟೆಯ ಯಶೋಧಮ್ಮ ಎನ್ನುವವರು ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ಮಗಳ ಮನೆಗೆ ತೆರಳಿದ್ದು, ಮರಳಿ ಮನೆಗೆ ಬರಲು ಕೊಂಗಾಡಿಯಪ್ಪ ಬಳಿ ಬಂದ ಆಟೋವನ್ನು ಹತ್ತಿದ್ದಾರೆ.
ಈ ಆಟದಲ್ಲಿ ಚಾಲಕನೊಂದಿಗೆ ಓಂಶಕ್ತಿ ಮಾಲಾಧಾರಿ ಮಹಿಳೆಯಿದ್ದು, ಆಕೆಯನ್ನು ಆಲಹಳ್ಳಿ ಬಿಟ್ಟು ನಂತರ ಯಶೋಧಮ್ಮ ಅವರನ್ನು ಮನೆಗೆ ಬಿಡುವುದಾಗಿ ಚಾಲಕ ಕರೆದೊಯ್ದಿದ್ದಾನೆ.
ಬಳಿಕ ನಾಗಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಈ ಜೋಡಿ, ಯಶೋಧಮ್ಮರ 33ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 4 ಗ್ರಾಂ ತೂಕದ ಓಲೆಯನ್ನು ದೋಚಿದ್ದು, ನಂತರ ಆಲಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ತನಿಖೆ ನಡೆಸಿ, ಯಶೋಧಮ್ಮ ಅವರನ್ನು ದೋಚಿದ್ದ ಖತರ್ನಾಕ್ ಜೋಡಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಬಂಧಿತರನ್ನು ರಾಜಾನುಕುಂಟೆ ಸಮೀಪದ ಹನಿಯೂರ ನಿವಾಸಿ ಆಟೋ ಚಾಲಕ ರಘು ಮತ್ತು ಚೆಲ್ಲಹಳ್ಳಿ ಗ್ರಾಮದ ಶ್ವೇತ ಎಂದು ಗುರುತಿಸಲಾಗಿದೆ.
ಇವರಿಬ್ಬರು ಪ್ರೇಮಿಗಳಾಗಿದ್ದು, ಓಂಶಕ್ತಿ ಮಾಲೆ ಧರಿಸಿದ್ದ ಶ್ವೇತಾಳಿಗೆ ಪೂಜಾ ಸಾಮಗ್ರಿ ಕೊಡಿಸಲು ದೊಡ್ಡಬಳ್ಳಾಪುರಕ್ಕೆ ಬಂದು, ಮರಳಿ ತೆರಳುವ ವೇಳೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಬಂಧಿತರು ಮಾಂಗಲ್ಯ ಸರವನ್ನು ಹೆಸರಘಟ್ಟದ ಮಣಿಪುರಂನಲ್ಲಿ ಅಡವಿಟ್ಟಿದ್ದು, ಮರು ವಸೂಲಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.