ದೊಡ್ಡಬಳ್ಳಾಪುರ (Doddaballapura): ಇತ್ತೀಚಿಗಷ್ಟೇ ಕೆಲಸದ ದಿನದಲ್ಲಿ ಕರ್ತವ್ಯ ಮರೆತು, ಸಾರ್ವಜನಿಕರ ಕಂದಾಯದ ಹಣದಲ್ಲಿ ಸಂಕ್ರಾಂತಿ ನೆಪದಲ್ಲಿ ಹಬ್ಬಕ್ಕೂ ಮುನ್ನಾ ದಿನವೇ ನಗರಸಭೆ ಸದಸ್ಯರು, ಅಧಿಕಾರಿಗಳು ಫ್ಯಾಷನ್ ಶೋ ನಡೆಸಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಇದರ ಬೆನ್ನಲ್ಲೇ ನಗರಸಭೆ ನೌಕರನ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅಧಿಕಾರಿಗಳ ಸಮ್ಮುಖದಲ್ಲೆ ಸಾರ್ವಜನಿಕವಾಗಿ ನಗರಸಭೆ ನೌಕರನ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲೆಯಿಂದ ಗುದ್ದಿ, ಹಲ್ಲೆ ನಡೆಸಿರುವ ಪ್ರಕರಣ ಬುಧವಾರ ಸಂಜೆ ನಡೆದಿದೆ.
ಈ ಘಟನೆಯಿಂದ ಬೇಸತ್ತ ಪೌರಕಾರ್ಮಿಕರು ಗುರುವಾರ ಕೆಲಸ ಸ್ಥಗಿತಗೊಳಿಸಿ ನಗರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ನಗರಸಭೆಯಲ್ಲಿನ ವಿಷಯನಿರ್ವಾಹಕ ರೇವಣ್ಣ ಅವರ ಮೇಲೆ ಕಚೇರಿಪಾಳ್ಯ ನಿವಾಸಿ ನಿಂಬೆಹಣ್ಣು ಕೃಷ್ಣಪ್ಪ ಎಂಬುವವರು ತಲೆಯಿಂದ ಡಿಚ್ಚಿ ಹೊಡೆದು ಹಲ್ಲೆ ನಡೆಸಿರುವ ದೃಶ್ಯ ಘಟನ ಸ್ಥಳದಲ್ಲಿನ ಸಿ.ಸಿ. ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರಸಭೆ ನೌಕರನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲೂ ವ್ಯಾಪಕ ಖಂಡನೆಗೆ ಒಳಗಾಗಿದೆ.
ಹಲ್ಲೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ರೇವಣ್ಣ, ನಗರಸಭೆ ಪೌರಾಯುಕ್ತರು, ಕಂದಾಯ ನಿರೀಕ್ಷಕರು ಅಂಗಡಿಯವರು ಪರವಾನಗಿ ಪಡೆಯೆ ಇರುವ ಬಗ್ಗೆ ವಿಚಾರಣೆ ಮಾಡುತ್ತಿದ್ದೆವು.
ಈ ವೇಳೆ ಸ್ಥಳಕ್ಕೆ ಬಂದ ನಿಂಬೆಹಣ್ಣು ಕೃಷ್ಣಪ್ಪ ಅವರು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದರು. ಕುತ್ತಿಗೆ ಪಟ್ಟಿ ಹಿಡಿದು ರಸ್ತೆಯಲ್ಲಿಯೇ ಎಳೆದಾಡಿದರು. ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬಿಡಿಸಿದರು ಎಂದು ತಿಳಿಸಿದ್ದಾರೆ.
ಬಂಧಿಸಲು ಆಗ್ರಹ
ಗುರುವಾರ ಬೆಳಿಗ್ಗೆ ನಗರಸಭೆ ಕಾರ್ಯಾಲಯದ ಬಳಿ ಸಭೆ ಸೇರಿದ ಪೌರಕಾರ್ಮಿಕರು ತಮ್ಮ ದೈನಂದಿನ ಕೆಲಸವನ್ನು ನಿಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿ ಪೌರಾಯುಕ್ತರಿಗೆ ಹಾಗೂ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆ ನಡೆಸಿರುವ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.