ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿರುವಂತ ದೊಡ್ಡಬಳ್ಳಾಪುರದ (Doddaballapura) ಕಂದಾಯ ಇಲಾಖೆ ಅಧಿಕಾರಿಗಳ ರಕ್ಷಣೆಗೆ ಸಚಿವ ಕೃಷ್ಣಬೈರೇಗೌಡ ನಿಂತಿದ್ದು, ಅವರ ವಿರುದ್ಧ ಕೂಡಲೇ ಅವರ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ದಿನೇಶ್ ಕಲ್ಲಹಳ್ಳಿ ಎಂಬುವವರು ದೂರು ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ದಿನೇಶ್ ಕಲ್ಲಹಳ್ಳಿ ಅವರು, ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150ರಲ್ಲಿ ಅಕ್ರಮವಾಗಿ ಜಮೀನು ಮಾರಾಟ ಮಾಡಲಾಗಿದೆ. ಪೋಡಿ, ನಕ್ಷೆ ಆಗದೇ ಜಮೀನು ಮಾರಾಟ ಮಾಡಲಾಗಿದೆ ಎಂದು ಅರೋಪಿಸಿದರು.
ಅಲ್ಲದೇ ಸಾಗುವಳಿದಾರರು ಜಮೀನನ್ನು ಡೆವಲಪರ್ಸ್ ಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಇದರಲ್ಲಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಉಪ ವಿಭಾಗಾಧಿಕಾರಿ ದುರ್ಗಾ ಶ್ರೀ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದಾರೆ. ಆದರೆ ಇವರಿಗೆಲ್ಲ ಸಚಿವ ಕೃಷ್ಣಬೈರೇಗೌಡ ರಕ್ಷಣೆಗೆ ನಿಂತಿದ್ದಾರೆ.
ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಆಶಿಸ್ತಿನಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಬಿಗಿ ಕ್ರಮಗಳನ್ನು ಕೈಗೊಳ್ಳದ ಸಚಿವ ಕೃಷ್ಣಬೈರೇಗೌಡ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದರು ಸಹ ದೂರಿಗೆ ಸ್ಪಂದಿಸದೆ ಅಕ್ರಮ, ವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ.
ಕೂಡಲೇ ಈ ಹಗರಣದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.