![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಕುಂಟೆ ಗ್ರಾಮದಲ್ಲಿನ ಲಲಿತಮ್ಮ ಎಂಬುವವರ ಮನೆಗೆ 2020ರ ಆಗಸ್ಟ್‌ಲ್ಲಿ ನುಗ್ಗಿ ತಾಯಿ ಮತ್ತು ತಂಗಿ ಎದುರಲ್ಲೇ ಮಗ ಮಂಜುನಾಥ (23 ವರ್ಷ) ಎಂಬಾತನನ್ನು ಭೀಕರವಾಗಿ ಕೊಲೆಗೈದು, ಡಕಾಯಿತಿ ನಡೆಸಿದ್ದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಎಂಟು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಯಾಸಿರ್ ಅಲ್ಪತ್, ಹೇಮಂತ್, ಸೋನು, ಸೋಮಶೇಖರ್, ಮನೋಜ್ ಕುಮಾರ್ , ಪ್ರಶಾಂತ್, ವೆಂಕಟೇಶ್ ಮತ್ತು ಅಂಶುಕುಮಾರ್ ಎಂಬುವವರಿಗೆ ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ದುರಗಪ್ಪ ಏಕಾಬೋಟಿ ಅವರು ವಿಚಾರಣೆ ನಡೆಸಿ ಎಲ್ಲಾ ಎಂಟು ಜನ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ಎಂ.ಬಿ.ನವೀನ್ ಕುಮಾರ್ ಅವರು ಪ್ರತ್ಯಕ್ಷ ಹಾಗೂ ಪೂರಕ ಸಾಕ್ಷಿಗಳು, ತಾಂತ್ರಿಕ ಸಾಕ್ಷಗಳನ್ನು ಸಂಗ್ರಹಿಸಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಆಶಾ ಹಾಗೂ ನಟರಾಜ್ ವಾದ ಮಂಡಿಸಿದ್ದರು.
ಅತ್ಯಂತ ಗಂಭೀರ ಪ್ರಕರಣವಾಗಿದ್ದರಿಂದ ಇದರ ಕೋರ್ಟ್ ಉಸ್ತುವಾರಿಯನ್ನು ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜು ನಿರ್ವಹಿಸಿದ್ದರು.
ತನಿಖೆಯನ್ನು ನಿರ್ವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಡಿವೈಎಸ್ಪಿ ರವಿ ಅವರು ಅಭಿನಂದಿಸಿದ್ದಾರೆ.