Site icon Harithalekhani

ಹಸುಗಳ ಕೆಚ್ಚಲನ್ನು ಕತ್ತರಿಸಿದ ಪ್ರಕರಣ: ಘಟನಾ ಸ್ಥಳದಲ್ಲಿ BJP ಮುಖಂಡರಿಂದ ಗೋ ಪೂಜೆ| Video

Go Puja by BJP leaders

Go Puja by BJP leaders

ಬೆಂಗಳೂರಿನ: ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಕತ್ತರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ (BJP) ನಿಯೋಗ ಕುಟುಂಬಸ್ಥರ ನಿವಾಸಕ್ಕೆ ತೆರಳಿ, ಗೋ ಪೂಜೆ ನೆರವೇರಿಸಿ ಸಂತ್ರಸ್ಥ ಕುಟುಂಬಕ್ಷೆ ಗೋವನ್ನು ನೀಡಿ ಧೈರ್ಯ ತುಂಬಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ತೆರಳಿದ ನಿಯೋಗ, ಹಸುಗಳ ಕೆಚ್ಚಲು ಕೊಯ್ದ ಜಾಗದಲ್ಲಿ ಸಂಕ್ರಾಂತಿ ಪ್ರಯುಕ್ತ ಹಸುಗಳಿಗೆ ಪೂಜೆ ನೆರವೇರಿಸಿದರು.

https://www.harithalekhani.com/wp-content/uploads/2025/01/1000872291.mp4

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮೊನ್ನೆಯ ದಿನ ದುರ್ಘಟನೆ ನಡೆದಿದೆ. ಕೇವಲ ಕರ್ನಾಟಕವಲ್ಲ ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ.

ಯಾವ ಪುಣ್ಯಭೂಮಿ ಮೇಲೆ ಗೋ ಮಾತೆ ಪೂಜೆ ಮಾಡುತ್ತೇವೋ ಅಂತಹ ಗೋವಿಗೆ ಏನಾಗಿದೆ ಅಂತ ರಾಜ್ಯ, ದೇಶದ ಜನ ಗಮನಿಸಿದ್ದಾರೆ.

ಇವತ್ತು ಹಸು ಮಾಲೀಕ ಕರ್ಣನಿಗೆ ಧೈರ್ಯ ಹೇಳಿದ್ದೇವೆ. ಗೋ ಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ.

ಸಿದ್ದರಾಮಯ್ಯ ಸಿಎಂ ಆದ ಮೇಲೆ ಗೋ ರಕ್ಷಣೆ ಆಗುತ್ತಿಲ್ಲ. ಈ ಘಟನೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಒಳ್ಳೆಯದು ಮಾಡಲ್ಲ, ಇವರ ಪಾಪದ ಕೊಡ ತುಂಬಿದೆ.

ಯಾರೋ ಬಡಪಾಯಿಯನ್ನು ಅರೆಸ್ಟ್ ಮಾಡಿದ್ದಾರೆ. ಹಸು ಮಾಲೀಕ ಕರ್ಣ ಧೈರ್ಯವಾಗಿ ಎದುರಿಸಿದ್ದಾನೆ. ನಾವು ಧೈರ್ಯ ಹೇಳಿ ಗೋ ಪೂಜೆ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದ್ದು, ಈ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಹಿಂದಿರುವ ಶಕ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯಾಧ್ಯಂತ ಹೋರಾಟ

ವಿರೋಧ ಪಕ್ಷದ ನಾಯಕ ಆರ್ ಅಶೋಕ ಮಾತಾಡಿ, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದು, ರಕ್ತ ಸುರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ಇದು ಒಬ್ಬರೇ ಮಾಡಿದ ಕೃತ್ಯವಲ್ಲ.

ಇದರಲ್ಲಿ ಹಲವರು ಭಾಗಿಯಾಗಿದ್ದಾರೆ. ಈ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡಬೇಕಿತ್ತು. ಈಗ ಸಂಕ್ರಾಂತಿ ಹಬ್ಬ ನಡೆಯುತ್ತಿದೆ.

ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಇಂತಹ ಸಮಯದಲ್ಲೇ ಈ ಕೃತ್ಯ ಮಾಡುವುದರ ಜೊತೆಗೆ ಹಸು ಮಾಲೀಕ ಕರ್ಣ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹಸುವನ್ನು ಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ದೂರಿದರು.

1 ಲಕ್ಷ ರೂ. ಪರಿಹಾರವನ್ನು ಹಸು ಮಾಲೀಕ ಕರ್ಣ ಅವರಿಗೆ ಬಿಜೆಪಿ ವತಿಯಿಂದ ನೀಡಲಾಗಿದೆ. ಹಿಂದೂಗಳು ಬೇಡುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‌ನವರು ಒಂದು ಕೈಯಲ್ಲಿ ಹಸುವನ್ನು ನೀಡುತ್ತಾರೆ. ಮತ್ತೊಂದು ಕಡೆ ಅವರ ಕಡೆಯವರೇ ನೀಡುವ ಹಸುವನ್ನು ಕತ್ತರಿಸುತ್ತಾರೆ.

ನನಗೀಗ ಪೊಲೀಸರು ಹಾಗೂ ಸರ್ಕಾರದ ಮೇಲೆಯೇ ಅನುಮಾನ ಬಂದಿದೆ. ಆರೋಪಿ ಜೇಬಿನಲ್ಲಿ ಬ್ಲೇಡ್‌ ಇಟ್ಟುಕೊಂಡು ಓಡಾಡುತ್ತಿದ್ದ, ಆತನಿಗೆ ಮತಿಭ್ರಮಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಂತಹ ವ್ಯಕ್ತಿ 10 ವರ್ಷ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ? ಮುಂಜಾನೆ 3-4 ಗಂಟೆಗೆ ಆತ ಇಲ್ಲಿಗೆ ಬರಲು ಹೇಗೆ ಸಾಧ್ಯ? ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರ್ಣ ಅವರ ಹಸುವಿನ ಕೆಚ್ಚಲನ್ನೇ ಕೊಯ್ದಿದ್ದೇಕೆ? ಎಂದು ಪ್ರಶ್ನೆ ಮಾಡಿದರು.

ಇಲ್ಲಿ ಪಶು ಆಸ್ಪತ್ರೆ ಬಹಳ ಕಡಿಮೆ ಸಂಖ್ಯೆಯಲ್ಲಿದೆ. ಅದರ ಜಾಗ ಲೂಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾತೆ ತಿದ್ದುಪಡಿ ಮಾಡಿ ವಕ್ಫ್‌ ಮಂಡಳಿಗೆ ನೀಡಿದ್ದಾರೆ. ಹಸು ಮಾಲೀಕ ಕರ್ಣನ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಆದರೆ ಹಸುವಿನ ಮೇಲೆ ದಾಳಿ ಮಾಡಿ ಕರ್ಣನಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಬಾಯಲ್ಲಿ ಯಾವುದೇ ವಿರೋಧದ ಮಾತು ಬಂದಿಲ್ಲ. ಮುಸಲ್ಮಾನರಿಗೆ ಏನಾದರೂ ಆಗಿದ್ದರೆ ಅವರೇ ಮುಂದೆ ಬಂದು ಮಾತಾಡುತ್ತಿದ್ದರು. ಆದರೆ ಈ ಮತಬ್ಯಾಂಕ್‌ ರಾಜಕಾರಣಕ್ಕೆ ನಾವ್ಯಾರೂ ಹೆದರುವುದಿಲ್ಲ.

ಇದು ಧರ್ಮಯುದ್ಧವಾಗಿದ್ದು, ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮಾಡಲಿದೆ. ಗೋವುಗಳ ಹತ್ಯೆ, ಹಿಂದೂಗಳ ಮೇಲಿನ ದಾಳಿ ಖಂಡಿಸಿ ಹೋರಾಡುತ್ತೇವೆ ಎಂದರು.

ತನಿಖೆ ಯಾಕಾಗಿಲ್ಲ

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿ ಕಬ್ಬಿನ ಗದ್ದೆಯಲ್ಲಿ ಇರಿಸಲಾಗಿತ್ತು. ಆದರೆ ಈ ಪ್ರಕರಣದ ಆರೋಪಿಯನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸರು ತನಿಖೆ ಮಾಡಲು ಆರೋಪಿಯನ್ನು ಕಸ್ಟಡಿಗೆ ಪಡೆಯಬೇಕಿತ್ತು. ಅದನ್ನು ಮಾಡದೆ ತನಿಖೆ ಸ್ಥಗಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯನವರು ಔಟ್‌ ಗೋಯಿಂಗ್‌ ಸಿಎಂ. ಇಂತಹ ಸಮಯದಲ್ಲಿ ಹಾಲು ನೀಡುವ ಹಸುವಿಗೆ ನ್ಯಾಯ ನೀಡುವ ಕೆಲಸ ಮಾಡಲಿ. ಗೋಮಾತೆಗೆ ಮೋಸ ಮಾಡಬೇಡಿ ಎಂದರು.

ಕಾಂಗ್ರೆಸ್‌ ಒಡೆದ ಮನೆಯಾಗಿದ್ದು, ಇನ್ನು ಈ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ಸಿಎಂ ಕುರ್ಚಿಗಾಗಿ ಜಗಳ ನಡೆಯುತ್ತಿದೆ ಎಂದರು.

ಈ ವೇಳೆ ಸಂಸದ ಪಿಸಿ ಮೋಹನ್, ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Exit mobile version