ದೊಡ್ಡಬಳ್ಳಾಪುರ (Doddaballapura): ಮಕರ ಸಂಕ್ರಾಂತಿ ಹಬ್ಬವನ್ನು ನಗರಸಭೆ ಕಾರ್‍ಯಾಲಯದ ಸೋಮವಾರ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸ್ಥಾಯಿಸಮಿತಿ ಅಧ್ಯಕ್ಷ ಸೇರಿದಂತೆ ಎಲ್ಲಾ ಸದಸ್ಯರು, ಅಧಿಕಾರಿ ವರ್ಗ ಸಂಕ್ರಾಂತಿ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷದಿಂದ ಹಬ್ಬ ಆಚರಣೆ ಮಾಡಿದರು.
ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಯಿತು. ನಂತರ ಗೋಪೂಜೆ ಮಾಡಲಾಯಿತು. ನಂತರ ಎಳ್ಳು – ಬೆಲ್ಲ ಹಂಚಿ ಪರಸ್ಪರ ಹಬ್ಬದ ಶುಭಾಶಯ ಕೋರಲಾಯಿತು.
ಆಕ್ಷೇಪ
ಆದರೆ ಈ ಆಚರಣೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಜನರ ಸಮಸ್ಯೆ ಆಲಿಸುವುದೊಂದನ್ನು ಬಿಟ್ಟು ಉಳಿದೆಲ್ಲ ಕೆಲಸ ನಗರಸಭೆಯಲ್ಲಿ ನಡೆಯುತ್ತಿದೆ.. ಹಬ್ಬ ಆಚರಣೆ ನೆಪದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಮಾಡಿದ್ದಾರೆ ಎಂದು ನಗರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷೆ ಸುಶೀಲ ರಾಘವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಂಕ್ರಾಂತಿ ಹಬ್ಬ ಇರುವುದು ಮಂಗಳವಾರ ಆದರೆ ಆಡಳಿತ ಮಂಡಳಿ, ಅಧಿಕಾರಿಗಳು ಕರ್ತವ್ಯ ಮರೆತು ಸೋಮವಾರ ಸಾರ್ವಜನಿಕ ಕೆಲಸಗಳನ್ನು ಬದಿಗೊತ್ತಿ ಹಬ್ಬವನ್ನು ಆಚರಿಸಿದ್ದಾರೆ… ಇದು ಎಷ್ಟು ಸರಿ..? ಎಂದು ಪ್ರಶ್ನಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು ಬಿದ್ದು ಅನೇಕರ ಜೀವ ಹಾನಿಯಾಗುತ್ತಿದೆ.. ಆದರೆ ನಗರಸಭೆ ಸದಸ್ಯರು ಮೌನ, ರಸ್ತೆ ಅಗಲಿಕರವಾಗದೆ ನಗರ ಕಿಷ್ಕಿಂದೆಯಾಗಿದೆ. ಆದರೆ ನಗರಸಭೆ ಸದಸ್ಯರು ಮೌನ, ಯುಜಿಡಿ ಸಮಸ್ಯೆ ಮಿತಿ ಮೀರಿದೆ ಆದರೆ ನಗರಸಭೆ ಸದಸ್ಯರು ಮೌನ, ಮನೆ ಮನೆ ಕೊಳಾಯಿ ಯೋಜನೆ ಆರಂಭವಾಗಿ ಅನೇಕ ವರ್ಷ ಕಳೆದರು ಪೂರ್ಣಗೊಂಡಿಲ್ಲ ಆದರೂ ನಗರಸಭೆ ಸದಸ್ಯರು ಮೌನ. ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿದೆ. ಆದರೆ ನಗರಸಭೆ ಸದಸ್ಯರು ಇದರ ಬಗ್ಗೆ ಮಾತನಾಡುವುದಿಲ್ಲ.
ಸಾಮಾನ್ಯ ಸಭೆಯಲ್ಲಿ ಮಾಧ್ಯಮಗಳ ಮುಂದೆ ಜೋರು ಜಾರೋಗಿ ಮಾತಾಡುವ ಕೆಲ ಸದಸ್ಯರು ಬಳಿಕ ನಗರಸಭೆ ವ್ಯಾಪ್ತಿಯಲ್ಲಿನ ಜನರ ಸಮಸ್ಯೆ ಆಲಿಸುತ್ತಿಲ್ಲ ಎಂಬ ಆಕ್ರೋಶ ಜನರದ್ದಾಗಿದ್ದು, ಸಂಕ್ರಾಂತಿ ಆಯ್ತು ಸಂತೋಷ.. ಮುಂದೆ ಕ್ರಿಸ್ಮಸ್, ರಂಜಾನ್ ಆಚರಣೆ ಮಾಡಿ ಎಂದು ಸಮುದಾಯಗಳು ಪಟ್ಟುಹಿಡಿದು ಪ್ರತಿಭಟನೆಗೆ ಮುಂದಾದರೆ ಯಾವ ಖರ್ಚಿನಿಂದ ಮಾಡ್ತೀರಾ..? ಎಂದು ಸುಶೀಲಮ್ಮ ರಾಘವ ಪ್ರಶ್ನಿಸಿದ್ದಾರೆ.
ನಗರಸಭೆ ಸದಸ್ಯರ ಪ್ಯಾಷನ್ ಶೋ: ರಾಜು ಸಣ್ಣಕ್ಕಿ
ಈ ಕುರಿತು ಪತ್ರಕರ್ತ ರಾಜುಸಣ್ಣಕ್ಕಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ನಗರಸಭೆ ಸರ್ಕಾರಿ ಸಂಸ್ಥೆಯಾಗಿದ್ದು, ಜಾತ್ಯಾತೀತತೆಯನ್ನು ಪ್ರತಿಪಾದನೆ ಮಾಡಬೇಕಿದೆ. ಅಭಿವೃದ್ಧಿ ಕಾರ್ಯಗಳನ್ನು ಮರೆತು, ಒಂದು ಧಾರ್ಮಿಕ ಆಚರಣೆ ಹೆಸರಲಿ ನಗರಸಭೆ ಸದಸ್ಯರು ಪ್ಯಾಷನ್ ಶೋ ರೀತಿ ನಡೆಸುವುದು ಸರಿಯಲ್ಲ.
ಈಗ ಹಿಂದೂ ಅಧ್ಯಕ್ಷರಾಗಿದ್ದಾರೆ ಸಂಕ್ರಾಂತಿ ಆಚರಣೆ ಮಾಡಿದ್ದೀರಿ, ಮುಂದೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಮುಂತಾದ ಸಮುದಾಯದವರು ಅಧ್ಯಕ್ಷರಾದಾಗ ಅವರು ಇದೇ ರೀತಿ ಆಚರಿಸಿದರೆ.. ಜಾತ್ಯಾತೀತತೆ ಎಲ್ಲಿ ಉಳಿಯುತ್ತದೆ..?
ಇಂತಹ ತೋರಿಕೆ ಡಂಬಾಚಾರಗಳನ್ನು ಬದಿಗೊತ್ತಿ, ನಗರಸಭೆಯಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ, ವಾರ್ಡಗಳಲ್ಲಿನ ಸಮಸ್ಯೆ, ಪ್ರಮುಖವಾಗಿ ರಸ್ತೆ ಅಗಲೀಕರಣದ ಕಡೆ ಗಮನಹರಿಸಿ ಜನಸ್ನೇಹಿ ನಗರಸಭೆ ಸದಸ್ಯರಾಗುವಂತೆ ರಾಜುಸಣ್ಣಕ್ಕಿ ಒತ್ತಾಯಿಸಿದ್ದಾರೆ.