ದೊಡ್ಡಬಳ್ಳಾಪುರ Sankranti 2025: ನಾಳೆಯ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನತೆ ಸಿದ್ದರಾಗುತ್ತಿದ್ದಾರೆ.
ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ದುಪ್ಪಟ್ಟು ಮಳೆ ಆಗಿದೆ. ಆದರೆ ಅಗತ್ಯ ಧಾನ್ಯಗಳ, ಹೂ ಹಣ್ಣುಗಳ ಗಗನಕ್ಕೇರಿರುವ ಬೆಲೆಗಳ ನಡುವೆ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸಬೇಕಿದೆ.
ದಿನೇ ದಿನೇ ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಹಿಂದಿನ ಸಂಭ್ರಮಾಚರಣೆ ಇಲ್ಲದಿದ್ದರೂ, ಹಬ್ಬದ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ.
ಕೆ.ಜಿ ಕಡಲೇಕಾಯಿ 100 ರಿಂದ 130ರೂ, ಎಳ್ಳು ಬೆಲ್ಲ ಕೆಜಿಗೆ 200 ರೂ. ಗೆಣಸು 50ರೂ. ಕಬ್ಬು ಜಳವೆಗೆ 60 ರಿಂದ 80 ರೂ. ಅವರೇಕಾಯಿ ಕೆ.ಜಿಗೆ 120 ರೂ ಇದ್ದು ಬೆಲೆಗಳು ಹಬ್ಬಕ್ಕಾಗಿ ಹೆಚ್ಚಿವೆ.
ಬೆಲೆ ಏರಿಕೆಯ ನಡುವೆಯೇ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಕಬ್ಬು, ಗೆಣಸು, ಕಡಲೇಕಾಯಿಗಳ ಮಾರಾಟ ಭರದಿಂದ ಸಾಗಿತ್ತು.
ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ, ಬೇಳೆ, ಧಾನ್ಯಗಳ ಬೆಲೆಯೊಂದಿಗೆ ಹೂವು ಹಣ್ಣಿನ ಬೆಲೆಗಳು ಸಹ ಗಗನಕ್ಕೇರಿವೆ.
ಕಾಕಡ ಕೆ.ಜಿಗೆ 600 ರಿಂದ 700ರೂ ಕನಕಾಂಬರ ಕೆ.ಜಿಗೆ 1600 ರಿಂದ 2000ರೂ ಇದ್ದರೆ ಶಾಮಂತಿಗೆ, ಗುಲಾಬಿ, ಸೇವಂತಿಗೆ ಮೊದಲಾದ ಹೂವಿನ ಬೆಲೆಗಳು 300 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಾಧಾರಣವಾಗಿವೆ.
ಇದನ್ನೂ ಓದಿ: Darshan: ಗನ್ ಪರವಾನಗಿ ರದ್ದು..! ನಟ ದರ್ಶನ್‌ಗೆ ತೊಂದರೆಯಾದ್ರೆ ಹೊಣೆ ಯಾರು..?
ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಯುವುದೇ ಕಡಿಮೆಯಾಗಿದ್ದು, ಕಬ್ಬನ್ನು ಹೊರಗಿನಿಂದ ತಂದು ಮಾರಾಟ ಮಾಡಲಾಗುತ್ತಿದೆ.
ಬೆಲೆಗಳ ಹೆಚ್ಚಳದ ನಡುವೆಯೂ ಸಂಕ್ರಾಂತಿ ಹಬ್ಬಕ್ಕಾಗಿ (Sankranti 2025) ಎಷ್ಟಾದರೂ ಸರಿ, ಹಬ್ಬ ಮಾಡಲೇ ಬೇಕೆಂದು ನಾಗರಿಕರು ಕೊಂಡು ಹೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ನಗರೀಕರಣದ ಪ್ರಭಾವವಿರುವ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಸಂಭ್ರಮ ಕಳೆದುಕೊಳ್ಳುತ್ತಿದ್ದಂತೆ ಭಾಸವಾಗುತ್ತಿತ್ತು.
ರಾಸುಗಳ ಸಂಖ್ಯೆ ಇಳಿಮುಖ
ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷದಂತೆ ಈ ಬಾರಿಯೂ ಕಾಟಿಮರಾಯನ ಹಬ್ಬದ ಆಚರಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ, ಕಿಚ್ಚು ಹಾಯಿಸುವ ಅಚರಣೆಗಳು ಸಂಕ್ರಾಂತಿಯಂದು ನಡೆಯಲಿವೆ. ಆದರೆ ದಶಕಗಳ ಹಿಂದೆ ಮನೆ ಮನೆಯಲ್ಲಿಯೂ ಇದ್ದ ರಾಸುಗಳ ಸಂಖ್ಯೆ, ಈಗ ಊರೆಲ್ಲ ಹುಡುಕಿದರೂ ಎರಡು ಮೂರು ಜೊತೆ ದನಗಳು ಎನ್ನುವಂತಾಗಿದೆ.