ಲಾಸ್‌ಎಂಜಲೀಸ್ ?(los angeles fire): ಅಮೆರಿಕ ಈವರೆಗೂ ಕಂಡುಕೇಳರಿಯದಂತಹ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಲಾಸ್ ಏಂಜಲೀಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಭಾಗದಲ್ಲಿ ಕಳೆದ 4 ದಿನಗಳಿಂದ ಹಬ್ಬುತ್ತಲೇ ಇರುವ ಕಾಡ್ಡಿಚ್ಚು, ಈವರೆಗೆ 11 ಜೀವಗಳನ್ನು ಬಲಿತೆಗೆದುಕೊಂಡಿದೆ.
ಲಾಸ್‌ಎಂಜಲೀಸ್ ರಾಜ್ಯವೊಂದರಲ್ಲಿ 12 ಸಾವಿರಕ್ಕೂ ಅಧಿಕ ಕಟ್ಟಡಗಳು ಭಸ್ಮವಾಗಿವೆ. ಹಾನಿ ಪ್ರಮಾಣ 13 ಲಕ್ಷ ಕೋಟಿ ರು. ತಲುಪಿದೆ ಎಂದ ಅಂದಾಜಿಸಲಾಗಿದೆ.
ಸತತ ಬೆಂಕಿಯಲ್ಲಿ ಬೇಯುತ್ತಿರುವ ಲಾಸ್ ಏಂಜಲೀಸ್ ರಾಜ್ಯದಲ್ಲಿ ಗುರುವಾರ ಸಂಜೆ 7ರ ವೇಳೆಗೆಲ್ಲಾ ಒಟ್ಟಾರೆ 38 ಸಾವಿರ ಎಕರೆಗಳಿಗೂ ಅಧಿಕ ವಿಸ್ತಾರದ ಪ್ರದೇಶ ಕಾಡಿಚ್ಚಿನ ಆರ್ಭಟಕ್ಕೆ ಸಿಲುಕಿ ಅಕ್ಷರಶಃ ಭಸ್ಮವಾಗಿದೆ.
ಲಾಸ್ ಏಂಜಲೀಸ್ ಭಾಗದಲ್ಲಿಯೇ ಈವರೆಗೆ 11 ಮಂದಿ ಸಾವಿಗೀಡಾಗಿದ್ದಾರೆ ಎಂಬುದು ದೃಢಪಟ್ಟಿದೆ. ಪ್ಯಾಲಿಸೇಡ್ಸ್ ಫೈರ್‌ನಲ್ಲಿ ಐವರು, ವಿಕ್ಟರ್ ಷಾ ಈಟನ್ ಫೈರ್‌ನಲ್ಲಿ ಆರು ಮಂದಿ ದಹಿಸಿಹೋಗಿದ್ದಾರೆ. ಆದರೆ, ಪ್ಯಾಲಿಸೇಡ್ಸ್ ಫೈರ್‌ನಲ್ಲಿ ಮಡಿದವರಲ್ಲಿ ನಾಲ್ವರ ಗುರುತು ಪತ್ತೆಯಾಗಿದ್ದು, ಆನೆಟ್ ರೋಸಿಲ್ಲಿ (86), ರಾಗ್ನಿ ನಿಕರ್ಸನ್(82), ವಿಕ್ಟರ್ ಶಾ(66), ವಿಶೇಷಚೇತನ ವ್ಯಕ್ತಿ ಆಂಥೋಣಿ ಮಿಷೆಲ್ (67) ಮತ್ತು ಅವರ ಪುತ್ರ ಜಸ್ಟಿನ್ ಎಂದು ಗುರುತಿಸಲಾಗಿದೆ.
ಉಳಿದವರ ಮೃತದೇಹಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಿದೆ ಎಂದು ಲಾಸ್ ಎಂಜಲೀಸ್ ಕೌಂಟಿಯ ಮೆಡಿಕಲ್ ಎಕ್ಸಾಮಿನರ್ ಕಚೇರಿ ಶನಿವಾರ ತಿಳಿಸಿದೆ.
ಕಾಡಿಚ್ಚಿಗೆ ಬಲಿಯಾದವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಕಾಡಿಚ್ಚು ಹಾನಿ ಮಾಡಿ ಮುಂದಕ್ಕೆ ಹೋಗಿರುವ ಪ್ರದೇಶಗಳಲ್ಲಿ ಶ್ವಾನಪಡೆಯ ನೆರವು ಪಡೆದು ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಹರಡುತ್ತಲೇ ಇರುವ ಬೆಂಕಿ
ಒಂದೆಡೆ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ, ಕಾಡ್ತಿಚ್ಚು ವಿಸ್ತಾರಗೊಳ್ಳುತ್ತಲೇ ಸಾಗಿದೆ. ಶುಕ್ರವಾರ ಸಂಜೆಯ ವೇಳೆಗೆ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ಹೊಸದಾಗಿ ವೆಸ್ಟ್ ಹಿಲ್ಸ್ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಲಾಸ್ ಏಂಜಲೀಸ್ ನಗರದಿಂದ 40 ಕಿ.ಮೀ. ದೂರದಲ್ಲಿ ಕಾಡಿಚ್ಚು ಹರಡುತ್ತಿದೆ. ಕಳೆದೆರಡು ದಶಕಗಳಿಂದ ಮಳೆಯಿ ಲ್ಲದೆ ಗಿಡಮರಗಳೆಲ್ಲಾ ಒಣಗಿದ್ದರಿಂದ ಬೆಂಕಿ ಹೊತ್ತಿಕೊಂಡು ಗಾಳಿಯಿಂದಾಗಿ ಹರಡುತ್ತಿದೆ ಎನ್ನಲಾಗಿದೆಯಾದರೂ, ಕಾಡಿಚ್ಚು ಸೃಷ್ಟಿಗೆ ಮೂಲ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಲಿವುಡ್‌ಗೆ ಬೆಂಕಿ
ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು. ಆದರೆ ಬಿರುಗಾಳಿ ವೇಗವಾಗಿ ಬೀಸತೊಡಗಿದ ಕಾರಣ ಮತ್ತೆ ಬೆಂಕಿ ಹರಡಲಾರಂಭಿಸಿತು.
ವೃದ್ದೆ ರೋಸಿಲ್ಲಿ ಅವರಿಗೆ ಕಾಡ್ಡಿಚ್ಚು ಹರುಡುತ್ತಿರುವ ಬಗ್ಗೆ ಎಚ್ಚರಿಸಿದೆವು. ತಕ್ಷಣವೇ ಮನೆ ಖಾಲಿ ಮಾಡಿ ನಮ್ಮೊಡನೆ ಸುರಕ್ಷಿತ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದೆವು. ಆದರೆ, ಆಕೆ ಸಾಕು ಪ್ರಾಣಿಗಳ ರಕ್ಷಣೆ ಮಾಡಬೇಕು ಎಂದು ಹೇಳಿ ನಮ್ಮೊಡನೆ ಬರಲು ನಿರಾಕರಿಸಿದರು. ಆಕೆ, 1 ನಾಯಿ, 1 ಆಮೆ, ಹಳದಿ ಬಣ್ಣದ ಪುಟ್ಟ ಪಕ್ಷಿಗಳು, 2 ಗಿಳಿಗಳನ್ನು ಸಾಕಿದ್ದರು ಎಂದು ನೆರೆಮನೆಯವರು ‘ಸಿಎನ್‌ಎನ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವೃದ್ದೆ ರೋಸಿಲ್ಲಿ ಅವರ ಮೃತದೇಹ ಕಾರಿನೊಳಗೆ ಪತ್ತೆಯಾಗಿದ್ದರೆ, ಎಕ್ಟರ್ ಶಾ ಕಳೇಬರ ರಸ್ತೆಮೇಲೆ ಬಹುತೇಕ ದಹಿಸಿಹೋದ ಸ್ಥಿತಿಯಲ್ಲಿ ರಕ್ಷಣಾ ಕಾರ್ಯಕರ್ತರ ಕಣ್ಣಿಗೆ ಬಿದ್ದಿದೆ.
ದುರುಳರಿಂದ ಲೂಟಿ
ಕಾಡಿಚ್ಚಿಗೆ ಸಿಲುಕಿದವರು ಜೀವ ಉಳಿಸಿಕೊಳ್ಳಲು ಹೆಣಗುತ್ತಿದ್ದರೆ, ಮತ್ತೊಂದಡೆ ಕಳ್ಳರು, ಲೂಟಿಕೋರರ ಹಾವಳಿ ಶುರುವಾಗಿದೆ. ಕಾಡಿಚ್ಚಿನ ಕಾರಣ ಸ್ಥಳಾಂತರಗೊಂಡವರ ಸಾಂಟಾ ಮೋನಿಕಾ ನಗರದಲ್ಲಿನ ಮನೆಗಳಿಗೆ ನುಗ್ಗುತ್ತಿರುವ ಲೂಟಿಕೋರರು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಹೋಗುತ್ತಿದ್ದಾರೆ.
ಈ ಬಗ್ಗೆ ಮನೆ ಮಾಲೀಕರು ದೂರಿದ ಬಳಿಕ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಈವರೆಗೆ ಲೂಟಿಯಲ್ಲಿ ತೊಡಗಿದ್ದ 20 ಜನರನ್ನು ಬಂಧಿಸಿದ್ದಾರೆ. ಸಾಂಟಾ ಮೋನಿಕಾ ನಗರದಲ್ಲಿ ಕರ್ಮ್ಯೂ ಘೋಷಿಸಲಾಗಿದೆ. ಜನರ ಆಸ್ತಿ ರಕ್ಷಣೆಗೆ ನ್ಯಾಷನಲ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.