ದೊಡ್ಡಬಳ್ಳಾಪುರ, (Doddaballapura): ಸಹಕಾರ ಹಾಗೂ ರಾಜಕೀಯದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಚ್.ಅಪ್ಪಯ್ಯಣ್ಣ ಅವರ ಸ್ಥಾನವನ್ನು ತುಂಬುಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹಾಡೋನಹಳ್ಳಿ ಗ್ರಾಮದ ರಂಗಮಂದಿರದಲ್ಲಿ ಇತ್ತೀಚಿಗೆ ನಿಧನರಾದ ಜೆಡಿಎಸ್ ಹಿರಿಯ ಮುಖಂಡ ಹೆಚ್.ಅಪ್ಪಯ್ಯಣ್ಣ ಅವರಿಗೆ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ, ಸಹಕಾರ ಕ್ಷೇತ್ರದ ವಿವಿಧ ಸ್ಥಾನಗಳನ್ನು ಅಲಂಕರಿಸಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಬಮೂಲ್ ಅಧ್ಯಕ್ಷರಾಗಿ ರಾಜಕೀಯದಲ್ಲಿ ಬೆಳೆದವರು ಅಪ್ಪಯ್ಯಣ್ಣರವರು. ನನ್ನ ಮಟ್ಟಿಗೆ ದೊಡ್ಡಬಳ್ಳಾಪುರ ಹಾಗೂ ಕನಕಪುರದಲ್ಲಿ ರಾಜಕೀಯ ನಡೆಸುವುದು ಕ್ಲಿಷ್ಟಕರ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಅಪ್ಪಯ್ಯಣ್ಣ ಅವರ ಪಾತ್ರ ಹಿರಿದಾಗಿದೆ.
ಬಮೂಲ್ ಅಧ್ಯಕ್ಷರಾಗಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಜೆಡಿಎಸ್‌ನಲ್ಲಿದ್ದರೂ ಇತರೆ ಪಕ್ಷದವರ ಜೊತೆ ಉತ್ತಮ ಬಾಂಧವ್ಯ ಹೊಂದಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ರಾಜಕೀಯ, ಸಮಾಜ ಸೇವೆಯಲ್ಲಿ ಅಪ್ಪಯ್ಯಣ್ಣರವರು ಬಹಳ ಕೆಲಸ ಮಾಡಿದ್ದಾರೆ.
ಚುನಾವಣೆ ಬಂದಾಗ ಪಕ್ಷದ ನಿಷ್ಠಾವಂತರಾಗಿ ಕೆಲಸ ಮಾಡಿದ್ದವರು. ಅವರ ಪಕ್ಷ ನಿಷ್ಠೆಯಿಂದ ತಳ ಮಟ್ಟದಲ್ಲಿ ಪಕ್ಷ ಬೆಳೆಯಲು ಸಹಾಯವಾಗಿದೆ. ಅವರ ಸಾವಿನ ದಿನ ನಮ್ಮ ಕುಟುಂಬದಿಂದ ಯಾರೂಬ್ಬರು ಬಾರದೆ ಇರುವುದಕ್ಕೆ ಬಹಳ ನೋವಿದೆ. ಇಂದು ಉಪ ರಾಷ್ಟ್ರಪತಿಗಳ ಜೊತೆ ಭಾಗವಹಿಸಬೇಕಾದ ಅನಿವಾರ್‍ಯತೆ ಇದ್ದರೂ ಮಧ್ಯಾಹ್ನದ ನಂತರ ಬರುತ್ತೇನೆ ಎಂದು ಈ ಕಾರ್‍ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಶರಣರ ಬಾಳನ್ನು ಮರಣದಲ್ಲಿ ಕಾಣು ಎಂಬಂತೆ ಅಪ್ಪಯ್ಯಣ್ಣ ಅವರು ಸಲ್ಲಿಸಿದ್ದ ಸೇವೆಯನ್ನು ಜನರು ಸ್ಮರಿಸುತ್ತಿದ್ದಾರೆ.
ಶ್ರೀ ಮಠದ ಅವರ ನಿಕಟ ಸಂಪರ್ಕದಿಂದಾಗಿ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್ ಬಳಿಯಲ್ಲಿ ಉತ್ತಮ ಪರಿಸರದ ಶಾಲೆ ನಿರ್ಮಾಣವಾಯಿತು. ಅವರ ಆಶಯದಂತೆ ಇಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ನಗರದಲ್ಲಿ ಒಕ್ಕಲೀಗರ ಭವನ, ಘಾಟಿ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವಲ್ಲಿಯೂ ಅವರ ಪಾತ್ರ ಇದೆ. ಶ್ರೀಮಠಕ್ಕೆ ನಾವು ಬೇಡುವ ಬಿಕ್ಷೆಗಾಗಿ ಸುಮಾರು 2000 ಕ್ವಿಂಟಾಲ್ ರಾಗಿಯನ್ನು ಸಂಗ್ರಹಿಸಿ ರಾಶಿ ಪೂಜೆಗೆ ಕರೆದಿದ್ದರು.
ಬಮೂಲ್‌ನಲ್ಲಿ ಅಧ್ಯಕ್ಷರಾಗಿದ್ದಾಗ ಅವ್ಯವಹಾರದ ಆರೋಪ ಬಂದಾಗ ಸಾಬೀತಾದರೆ ರಾಜೀನಾಮೆ ನೀಡಲು ಸಿದ್ದ ಎಂದಿದ್ದರು. ಅವರ ಮೊಮ್ಮಗಳು ವೈದ್ಯರಾಗಿ ತಾತನಿಗೆ ಚಿಕಿತ್ಸೆ ನೀಡುವೆ ಎಂದಿದ್ದರು. ಆದರೆ ಮಲಗಿದ್ದವರು ಏಳದೇ ಇರುವ ಅವರ ಸಾವು ಎಲ್ಲರಿಗೂ ದಿಗ್ಬ್ರೆಮೆಯಾಗಿತ್ತು ಎಂದರು.
ಹೆಚ್.ಅಪ್ಪಯ್ಯಣ್ಣ ಅವರು ಪುತ್ರ ಗ್ರಾ.ಪಂ ಸದಸ್ಯ ಎಚ್.ಎ.ನಾಗರಾಜ್ ಭಾವುಕರಾಗಿ ಮಾತನಾಡಿ, ತಮ್ಮ ತಂದೆಯ ರಾಜಕೀಯ ಜೀವಿತದಲ್ಲಿ ಬಮೂಲ್ ಚುನಾವಣೆ ನಡೆದಾಗ, ಆಣೆ ಪ್ರಮಾಣ ಮಾಡಿ ಮತ ಹಾಕುತ್ತೇವೆ ಎಂದು ಅವರನ್ನು ಸೋಲಿಸಿದ್ದನ್ನು ನೆನೆದು ತುಂಬಾ ನೋವುಂಡಿದ್ದರು.
ದೇಶಿ ತಳಿಗಳ ರಕ್ಷಣೆ, ಹೈನುಗಾರಿಕೆಯಿಂದ ರೈತರಿಗೆ ಅನುಕೂಲವಾಗಬೇಕೆಂದು ಅಪಾರವಾಗಿ ಶ್ರಮಿಸಿದ್ದರು. ಅವರ ರಾಜಕೀಯ ಬದುಕು ಹಾಗೂ ಸಮಾಜ ಸೇವೆ ನಮೆಗೆಲ್ಲ ಮಾದರಿಯಾಗಿದ್ದು ಅದನ್ನು ಮುಂದುವರೆಸಿಕೊಂಡು ತಂದೆಯವರ ಹೆಸರು ಉಳಿಸುವುದಾಗಿ ತಿಳಿಸಿದರು.
ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರು ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅಪ್ಪಯ್ಯಣ್ಣನವರು ಬೆಂಗಳೂರು ಜಿ ಜೆಡಿಎಸ್ ಉಪಾಧ್ಯಕ್ಷರಾಗಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಬಮುಲ್ ಅಧ್ಯಕ್ಷರಾಗಿ, ಜಿ ಪಂಚಾಯಿತಿ ಅಧ್ಯಕ್ಷರಾಗಿ, ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಹೀಗೆ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಉಳಿಸಿಕೊಂಡಿದ್ದರು ಎಂದು ಹೆಚ್.ಅಪ್ಪಯ್ಯಣ್ಣ ಅವರ ರಾಜಕೀಯ ಬದುಕು ಹಾಗೂ ಅವರೊಂದಿಗಿನ ಒಡನಾಟಗಳನ್ನು ಸ್ಮರಿಸಿದರು.
ಇದೇ ವೇಳೆ ಅಪ್ಪಯ್ಯಣ್ಣನವರು ನಡೆದು ಬಂದ ದಾರಿ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಇದಕ್ಕೂ ಮುನ್ನ ಕಾರ್‍ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಅಪ್ಪಯ್ಯಣ್ಣ ಅವರ ಸಮಾಧಿ ಬಳಿಗೆ ತೆರಳಿ ನಮನ ಸಲ್ಲಿಸಿದರು.
ಕಾರ್‍ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳ ಮುನಿಶ್ಯಾಮಪ್ಪ, ವಿಧಾಣಪರಿಷತ್ ಮಾಜಿ ಸದಸ್ಯರಾದ ಇ.ಕೃಷ್ಣಪ್ಪ, ರಮೇಶ್ ಗೌಡ, ಚೌಡರೆಡ್ಡಿ, ರಾಜ್ಯ ತೆಂಗು ನಾರು ಸಹಕಾರ ಮಂಡಳಿ ಅಧ್ಯಕ್ಷ ವೆಂಕಟೇಶ ಬಾಬು ಜೆಡಿಎಸ್ ರಾಜ್ಯ ಕಾರ್‍ಯದರ್ಶಿಗಳಾದ ಡಾ.ಎಚ್.ಜಿ.ವಿಜಯ ಕುಮಾರ್, ಎಸ್.ಎಂ.ಹರೀಶ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಪುರುಷೋತ್ತಮ್, ಹಿರಿಯ ಮುಖಂಡರಾದ ನರಸಿಂಹಯ್ಯ, ಕೆ.ಎಂ.ಹನುಮಂತರಾಯಪ್ಪ, ರಾಜಣ್ಣ, ಜೆಡಿಎಸ್ ವಕ್ತಾರ ಕುಂಟನಹಳ್ಳಿ ಮಂಜುನಾಥ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.