ದೊಡ್ಡಬಳ್ಳಾಪುರ: ವೈಕುಂಠ ಏಕಾದಶಿಯ ( Vaikunta ekadasi) ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಗರದ ಹಲವು ವಿಷ್ಣು ದೇವಾಲಯಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶುಕ್ರವಾರ ಬೆಳಗ್ಗೆನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ. ಇನ್ನು ಬೆಳಗ್ಗಿನಿಂದ ರಾತ್ರಿವರೆಗೆ ವೈಕುಂಠದ್ವಾರದ ಪ್ರವೇಶಕ್ಕೆ ಅವಕಾಶವನ್ನೂ ಕಲ್ಪಿಸಲಾಗಿದೆ.
ತಾಲೂಕಿನ ವೆಂಕಟರಮಣಸ್ವಾಮಿ, ರಂಗನಾಥಸ್ವಾಮಿ, ವೇಣುಗೋಪಾಲಸ್ವಾಮಿ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಗರದ ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ.
ತಾಲೂಕಿನ ವಡ್ಡರಹಳ್ಳಿಯ ಶ್ರೀ ತಿರುಮಲ ಕಲ್ಯಾಣ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಈ ಬಾರಿ ವೈಕುಂಠ ದರ್ಶನದ ವಿಶೇಷ ಅಲಂಕಾರ ಮಾಡಲಾಗಿದೆ. ಇದರ ಅಂಗವಾಗಿ ವೈಕುಂಠ ರಥವನ್ನು ಸಿದ್ದಪಡಿಸಲಾಗಿದ್ದು, ವೈಕುಂಠ ಏಕಾದಶಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಚಾರ ಕೈಗೊಳ್ಳಲಾಗುತ್ತಿದೆ.
ಮುಖ್ಯರಸ್ತೆಯ ವೈಕುಂಠ ಜನಾರ್ಧನ ಸ್ವಾಮಿ, ಗಾಂಧಿನಗರದ ಖಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯ, ಕೆರೆಬಾಗಿಲು ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ, ಏಳುಸುತ್ತಿನ ಕೋಟೆಯ ಶ್ರೀ ನಾರಾಯಣ ಮಂದಿರ, ನರಸಿಂಹಸ್ವಾಮಿ ದೇವಾಲಯ, ತಾಲೂಕಿನ ಪಾಲ್‍ಪಾಲ್ ದಿನ್ನೆಯ ವಿಶ್ವ ಕಲ್ಯಾಣ ವೆಂಕಟೇಶ್ವರ ದೇವಾಲಯ, ಗುಟ್ಟೆ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.