ದೊಡ್ಡಬಳ್ಳಾಪುರ (Doddaballapura); ಇಂದು ವೈಕುಂಠ ಏಕಾದಶಿ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಅಂತೆಯೇ ತಾಲೂಕಿನ ವೆಂಕಟರಮಣಸ್ವಾಮಿ, ರಂಗನಾಥಸ್ವಾಮಿ, ವೇಣುಗೋಪಾಲಸ್ವಾಮಿ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತಾದಿಗಳು ಭಕ್ತಾದಿಗಳು ದೇವಾಲಯದ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಸಾಕ್ಷಾತ್ ವೈಕುಂಠ ದರ್ಶನವೇ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿಂದ ಭಕ್ತಾದಿಗಳು ಉತ್ತರಾಭಿಮುಖದ ವೈಕುಂಠ ದ್ವಾರದ ಮೂಲಕ ಹಾದು ದರ್ಶನ ಪಡೆದರು.
ತಾಲೂಕಿನ ವಡ್ಡರಹಳ್ಳಿಯ ಶ್ರೀ ತಿರುಮಲ ಕಲ್ಯಾಣ ಶ್ರೀನಿವಾಸ ದೇವರ ದೇವಾಲಯದಲ್ಲಿ ವಿಶೇಷ ವೈಕುಂಠ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ನಗರದ ಮುಖ್ಯರಸ್ತೆಯ ವೈಕುಂಠ ಜನಾರ್ಧನ ಸ್ವಾಮಿ, ಗಾಂಧಿನಗರದ ಖಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯ, ಕೆರೆಬಾಗಿಲು ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ, ಏಳುಸುತ್ತಿನ ಕೋಟೆಯ ಶ್ರೀ ನಾರಾಯಣ ಮಂದಿರ, ನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ತಾಲೂಕಿನ ತೂಬಗೆರೆಯ ಪುರಾತನ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ತಾಲೂಕಿನ ಪಾಲ್ಪಾಲ್ ದಿನ್ನೆಯ ವಿಶ್ವ ಕಲ್ಯಾಣ ವೆಂಕಟೇಶ್ವರ ದೇವಾಲಯ, ಗುಟ್ಟೆ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಅಲಂಕಾರ ಅಭಿಷೇಕ ಪೂಜಾ ಕಾರ್ಯಕ್ರಮಗಳು ನಡೆದವು.