ಬೆಂಗಳೂರು: ಎರಡು ಚಿಂಕೆಗಳು ಮತ್ತು ಎರಡು ಕಾಡು ಹಂದಿಗಳನ್ನು ಬಂದೂಕಿನಿಂದ ಬೇಟೆಯಾಡಿ (Hunting), ಅಕ್ರಮವಾಗಿ ಮಹೀಂದ್ರ ಥಾರ್ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪದ ಮೇಲೆ ಮೂರು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಅಪರಾಧ ನಿಯಂತ್ರಣ ಕೋಶ (ಜಾಗೃತ) ಹಾಗೂ ಅರಣ್ಯ ಸಂಚಾರಿ ದಳ ಅರಣ್ಯಾಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾರೋಹಳ್ಳಿ- ಬಿಡದಿ ರಸ್ತೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಎರಡು ಜಿಂಕೆ, ಎರಡು ಕಾಡು ಹಂದಿಗಳನ್ನು ಬೇಟೆಯಾಡಿ ಮಹೀಂದ್ರ ಥಾರ್ ಜೀಪ್ ನಲ್ಲಿ ಎರಡು ಬಂದೂಕುಗಳು ಹಾಗೂ ಮಾರಕಾಸ್ತ್ರಗಳ ಸಮೇತ ಸಾಗಿಸುತ್ತಿದ್ದನ್ನು ವಶಪಡಿಸಿಕೊಂಡರುವ ಅಧಿಕಾರಿಗಳು 3 ಜನ ಆರೋಪಿಗಳ ಸೆರೆ ಹಿಡಿದಿದ್ದಾರೆ.
ಬಂಧಿತರನ್ನು ತೋಟದಗುಡ್ಡದಹಳ್ಳಿಯ ಶ್ರೀನಿವಾಸ (47 ವರ್ಷ), ನೆಲಮಂಗಲ ತಾಲೂಕಿನ ವಾದಕುಂಟೆ ಗ್ರಾಮದ ಹನುಮಂತ ರಾಜು (44 ವರ್ಷ) ಹಾಗೂ ರಾಮನಗರ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಸಿ ಮುನಿರಾಜು ಎಂದು ಗುರುತಿಸಲಾಗಿದೆ.