ತಿರುಪತಿ: ಬುಧವಾರ ರಾತ್ರಿ ತಿರುಪತಿ (Tirupati) ದೇಗುಲದ ಬಳಿ ಸಂಭವಿಸಿದ ಘನಘೋರ ದುರಂತ ಕುರಿತು ವ್ಯಾಪಕ ಆಕ್ರೋಶ, ಚರ್ಚೆಗೆ, ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರ ಗೇಟದ ಬಳಿ ಓರ್ವ ಮಹಿಳೆ ಉಸಿರಾಟ ತೊಂದರೆ ಕಾರಣ, ಆಸ್ಪತ್ರೆಗೆ ಕರೆದೊಯ್ಯಲೆಂದು ಗೇಟ್ ತೆರದ ವೇಳೆ ಏಕಾಏಕಿ ಸಾವಿರಾರು ಮಂದಿ ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅವಘಡದಲ್ಲಿ 5 ಮಂದಿ ಮಹಿಳೆಯರು, ಓರ್ವ ಪುರುಷ ಸಾವನಪ್ಪಿದ್ದಾರೆ. ಅಲ್ಲದೆ ಕರ್ನಾಟಕ ಮೂಲದ ಓರ್ವ ಮಹಿಳೆ ಕೂಡ ಸಾವನಪ್ಪಿದ್ದಾರೆ.
ಗೇಟ್ ಬಳಿ ಏಕಾಏಕಿ ನೂಕಾಟದ ವೇಳೆ ಉಂಟಾದ ಭೀಕರ ಕಾಲ್ತುಳಿತದಲ್ಲಿ ಕರ್ನಾಟಕದ ಬಳ್ಳಾರಿ ಮೂಲದ ಮಹಿಳೆ 50 ವರ್ಷದ ನಿರ್ಮಲಾ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಉಳಿದಂತೆ ಆಂಧ್ರಪ್ರದೇಶದ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34) ಮತ್ತು ತಮಿಳುನಾಡಿನ ಸೇಲಂ ಪ್ರದೇಶದ ಮಲ್ಲಿಗಾ (49) ಶವವಾಗಿ ಪತ್ತೆಯಾಗಿದ್ದಾರೆ.
ಇನ್ನೂ ಘಟನೆಯಲ್ಲಿ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಘಟನೆ ಬೆನ್ನಲ್ಲೇ ತಿರುಪತಿ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂದು 12 ಗಂಟೆ ಸಿಎಂ ಚಂದ್ರಬಾಬು ನಾಯ್ಡು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.