ದೆಹಲಿ: ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Isro) ಕೈಗೊಂಡ ಪ್ರಯೋಗ ಮೊದಲ ಯತ್ನದಲ್ಲೇ ಯಶಸ್ವಿಯಾಗಿದೆ.
‘ಇಸ್ರೋ’ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿದ್ದ ಅಲಸಂದೆ ಬೀಜಗಳು ಮೊಳಕೆಯೊಡೆದಿದ್ದು, ಎಲೆಗಳನ್ನು ಬಿಟ್ಟಿವೆ.
‘ಇಸ್ರೋ’ ತನ್ನ ಅಧಿಕೃತ ‘ಟ್ವಿಟರ್’ ಖಾತೆಯಲ್ಲಿ ಮಂಗಳವಾರ ವಿಡಿಯೋ ಮತ್ತು ಮಾಹಿತಿ ಹಂಚಿಕೊಂಡು ಸಂಭ್ರಮಿಸಿದೆ.
ಬಾಹ್ಯಾಕಾಶಕ್ಕೆ ಕಳುಹಿಸಿ ಕೊಡಲಾಗಿದ್ದ ಅಲಸಂದೆ ಬೀಜಗಳು ಬಾಹ್ಯಾಕಾಶ ಸೇರಿದ 4 ದಿನಗಳಲ್ಲೇ ಮೊಳಕೆ ಬಂದಿವೆ ಎಂದು ಇಸ್ರೋ ಹೇಳಿದೆ.
“ಬಾಹ್ಯಾಕಾಶದಲ್ಲಿ ಡಾಕಿಂಗ್‌ಗಾಗಿ ಜೋಡಿ ಉಪಗ್ರಹಗಳನ್ನು ಹೊತ್ತು ಮಂಗಳವಾರ ಉಡಾವಣೆಗೊಂಡ ಪಿಎಸ್‌ಎಲ್‌ವಿ-ಸಿ60 ರಾಕೆಟ್‌ನಲ್ಲಿಯೇ ಅಲಸಂದೆ ಬೀಜಗಳು ಸೇರಿದಂತೆ ಅಂತರಿಕ್ಷದಲ್ಲಿ ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಇರಿಸಲಾಗಿತ್ತು.
ಈ ಘಟಕ ಇನ್ನೂ 3-4 ದಿನ ಕಾರ್ಯನಿರ್ವಹಿಸಲಿದೆ. ಬಾಹ್ಯಾಕಾಶದಲ್ಲಿ ಸಸ್ಯ ಬೆಳವಣಿಗೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ’ ಎಂದು ಇಸ್ರೋ ಹೇಳಿದೆ.
ಡಿ.30ರ ರಾತ್ರಿಯಷ್ಟೇ ಪಿಎಸ್‌ಎಲ್‌ವಿ-ಸಿ60 ರಾಕೆಟ್ ಅವಳಿ ಉಪಗ್ರಹಗಳನ್ನು ಭೂಮಿಯಿಂದ 350 ಕಿಮೀ ಎತ್ತರದ ಆಕಾಶಕ್ಕೆ ಯಶಸ್ವಿಯಾಗಿ ಕೊಂಡೊಯ್ದು ತಲುಪಿಸಿದ ಉಡ್ಡಯನ ಕಾರ್ಯಾಚರಣೆಯ ಭಾಗವಾಗಿಯೇ ಈ ‘ಕ್ರಾಪ್ಸ್’ ಪ್ರಯೋಗ ವನ್ನೂ ನಡೆಸಲಾಗಿದೆ.
8 ಅಲಸಂದೆ ಬೀಜಗಳು, ಅವು ಮೊಳಕೆಯೊಡೆಯಲು ಬೇಕಾದ ಪರಿಕರಗಳು ಎಲ್ಲವನ್ನು ಒಳಗೊಂಡ ‘ಪಿಒಇಎಂ-4’ ಪ್ಲಾಟ್‌ಫಾರ್ಮ್ ಪಿಎಸ್‌ಎಲ್‌ವಿ-ಸಿ60 ರಾಕೆಟ್‌ನ 4ನೇ ಹಂತದಲ್ಲಿತ್ತು.
ಇದಕ್ಕೂ ಮುನ್ನ ಚೀನಾ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜಲಚರಗಳನ್ನು ಬೆಳೆಸುವ ಪ್ರಯೋಗ ನಡೆಸಿ ಯಶಸ್ಸು ಕಂಡಿದೆ.
ಜೆಲ್ಲಿ ಫಿಶ್ ಗಳನ್ನು ಶೂನ್ಯ ಗುರುತ್ವಾಕರ್ಷಣ ವಲಯದಲ್ಲಿ ಬೆಳೆಸುತ್ತಿರುವ ಚೀನಾ, ಅಂತರಿಕ್ಷದಲ್ಲಿ ಮಾನವನಿಗೆ ಹೊರತಾದ ಜೀವಿಗಳ ಇರುವಿಕೆ ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದೆ.