ನವದೆಹಲಿ: ದೇಶದಲ್ಲಿ ಚೀನಾದ ಮತ್ತೊಂದು ವೈರಸ್ (HMPV) ಕಾಟ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಎರಡು, ಗುಜರಾತ್, ಪ.ಬಂಗಾಳದಲ್ಲಿ ತಲಾ 1, ತಮಿಳುನಾಡಿನಲ್ಲಿ 2 ಪ್ರಕರಣ ಸೇರಿದಂತೆ ದೇಶದಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಇಬ್ಬರು ಮಕ್ಕಳಲ್ಲಿ ಸೋಂಕಿರುವುದು ಪತ್ತೆಯಾಗುತ್ತಿ ದ್ದಂತೆ ಸೋಮವಾರ ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿ ಯಾವ ರೀತಿಯಲ್ಲಿ ಕ್ರಮ ವಹಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದೆ.
ಇದರೊಂದಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿರುವ ಆರೋಗ್ಯ ಇಲಾಖೆ, ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಸಲಹೆ ನೀಡಿದೆ. ಮಾಸ್ಕ್ ಧಾರಣೆ ಸದ್ಯಕ್ಕೆ ಕಡ್ಡಾಯಗೊಳಿಸದಿದ್ದರೂ, ಮುಂದಿನ ದಿನಗಳಲ್ಲಿ ವಿಕೋಪಕ್ಕೆ ಹೋದರೆ ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೊಸ ವೈರಸ್ ಅಲ್ಲ, ಆತಂಕ ಬೇಡ: ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಹೂಮನ್ ಮೆಟಾನ್ಯುಮೊ ವೈರಸ್ (ಎಚ್ ಎಂಪಿವಿ) ಇಬ್ಬರು ಮಕ್ಕಳಲ್ಲಿ ಪತ್ತೆಯಾ ಗಿದೆ. ಆದರೆ ಇದು ಹೊಸ ವೈರಸ್ ಅಲ್ಲ. ಇದರಿಂದ ಯಾವುದೇ ಪ್ರಾಣಾಪಾಯವಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್‌ಎಂಪಿವಿ ಕುರಿತಾಗಿ ಸದ್ಯ ಕೇಂದ್ರದಿಂದಲೂ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಆದರೆ ರಾಜ್ಯ ಸರಕಾರ ಈ ವಿಚಾರವಾಗಿ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿದ್ದು, ಐಸಿ ಎಂಆರ್ ಸೂಚನೆಗಳನ್ನು ಅನುಸರಿಸಲಾಗುವುದು.
ಇದು ದೇಶದಲ್ಲಿ ಪ್ರಥಮ ಪ್ರಕರಣ ಎಂದು ಹೇಳುವುದು ಸರಿಯಲ್ಲ. 2001ರಲ್ಲಿ ನೆದರ್‌ಲ್ಯಾಂಡ್‌ನಲ್ಲಿ ಮೊದಲಿಗೆ ಪತ್ತೆಯಾದ ಎಚ್‌ಎಂಪಿ ವೈರಸ್ ಭಾರತ ಸೇರಿ ಎಲ್ಲೆಡೆ ಇದೆ. ಇದರಿಂದ ಯಾವುದೇ ಅಪಾಯ ಇಲ್ಲ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ.
ಇದು ಮಾರಣಾಂತಿಕ ವೈರಸ್ ಅಲ್ಲ. ಹಾಗಾಗಿ ವೈರಾಣು ಕುರಿತು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಬದಲಿಗೆ ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಸೇರಿ ಶೀತ ಸಂಬಂಧಿ ಸಮಸ್ಯೆ ಇರುವವರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಸಾಮಾನ್ಯವಾಗಿ ಐಎಲ್‌ಐ ಪ್ರಕರಣಗಳಲ್ಲಿ ಶೇ.1ರಷ್ಟು ಎಚ್ ಎಂಪಿವಿ ಕಂಡು ಬರುತ್ತದೆ. ಇಂಥಹುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಎಚ್‌ಎಂಪಿ ವೈರಾಣು ಪತ್ತೆಯಾಗಿದೆ. ಇಬ್ಬರು ಮಕ್ಕಳಲ್ಲಿ ಮೂರು ತಿಂಗಳ ಮಗು ಸಂಪೂರ್ಣ ಗುಣಮುಖವಾಗಿ ಡಿಸೆಂಬರ್‌ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
ಎಂಟು ತಿಂಗಳ ಮಗು ಬಹುತೇಕ ಗುಣ ಹೊಂದಿದ್ದು, ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಲಿದೆ. ಹಾಗಾಗಿ ಹೆಚ್ಚಿನ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.
ಮಾರ್ಗಸೂಚಿಯಲ್ಲಿ ವಿವರ
ಏನು ಮಾಡಬೇಕು?
- ಮಾಸ್ಕ್ ಧರಿಸಿ, ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಮ್ಯೂ ಪೇಪರ್ ಬಳಕೆ ಮಾಡಿ
- ಪದೇ ಪದೆ ಕೈಯನ್ನು ಸೋಪ್‌ನಿಂದ ಅಥವಾ ಆಲ್ನೋಹಾಲ್ ಸ್ಯಾನಿಟೈಸರ್‌ನಿಂದ ತೊಳೆಯಿರಿ
- ನಿಮಗೆ ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದರೆ ಜನನಿಬಿಡ ಪ್ರದೇಶದಿಂದ ದೂರವಿರಿ
- ನಿಮಗೆ ಹುಷಾರಿಲ್ಲದಿದ್ದರೆ ಮನೆಯಲ್ಲಿ ಇರಿ ಮತ್ತು ಇತರರೊಂದಿಗೆ ಸೀಮಿತ ಸಂಪರ್ಕ ಸಾಧಿಸಿ
- ಸಾಧ್ಯವಾದಷ್ಟು ನೀರು ಮತ್ತು ಪೋಷಕಾಂಶಯುಕ್ತ ಆಹಾರ ಸೇವಿಸಿ
ಇದನ್ನು ಮಾಡಬೇಡಿ
- ಒಮ್ಮೆ ಬಳಸಿದ ಕರವಸ್ತ್ರ ಮತ್ತು ಟಿಮ್ಯೂ ಮರುಬಳಕೆ ಬೇಡ
- ಅನಾರೋಗ್ಯಕ್ಕೆ ಒಳಗಾದ ನಿಮ್ಮ ಹತ್ತಿರದವರ ಟವೆಲ್ ಸೇರಿದಂತೆ ಇತರೆ ವಸ್ತುಗಳ ಬಳಕೆ ಬೇಡ
- ಪದೇ ಪದೆ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ
- ಸಾರ್ವಜನಿಕ ಸ್ಥಳದಲ್ಲಿ ಉಗಿಯಬೇಡಿ
- ವೈದ್ಯರ ಸಂಪರ್ಕಕ್ಕೆ ಒಳಗಾಗದೇ ಸ್ವಯಂ ಚಿಕಿತ್ಸೆ ಬೇಡ (ಸಾಂದರ್ಭಿಕ ಚಿತ್ರ ಬಳಸಲಾಗಿದೆ)