ದೊಡ್ಡಬಳ್ಳಾಪುರ, (Doddaballapura): ಕಳೆದ ಕೆಲ ದಿನಗಳಿಂದ ಉಂಟಾಗುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದಲ್ಲಿ ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಇದರ ಅನ್ವಯ ನಗರದ ವ್ಯಾಪ್ತಿಯಲ್ಲಿನ ನಾಗರಕೆರೆ ರಸ್ತೆ, ಶಾಂತಿನಗರ ರಸ್ತೆ, ಒಕ್ಕಲಿಗರ ಸಮುದಾಯ ಭವನ, ಎಪಿಎಂಸಿ ಮಾರುಕಟ್ಟೆ ಮುಖ್ಯದ್ವಾರದ ಮುಂದೆ ಮತ್ತು ಸರ್ಕಾರಿ ಆಸ್ಪತ್ರೆ ಮುಂಭಾಗದ ರಸ್ತೆಗಳಲ್ಲಿ ವೇಗ ನಿಯಂತ್ರಕ (ಹಂಪ್ಸ್) ಅಳವಡಿಸುವ ಕುರಿತು ಚಿಂತಿಸಲಾಗಿದೆ.
ಇದರ ಅಂಗವಾಗಿ ಇಂದು ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪುರುಷೋತ್ತಮ್ ಅವರೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿದರು.
ಮುಂದು ಸಾರಿಗೆ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವಾಹನಗಳನ್ನು ಓಡಿಸುವ ಸವಾರರಿಗೆ ದಂಡ ವಿಧಿಸುವುದು, ಏಕಮುಖ ರಸ್ತೆ, ಬೇಕಾಬಿಟ್ಟಿ ವಾಹನ ನಿಲುಗಡೆಗೆ ದಂಡ, ಗಾರ್ಮೆಂಟ್ ವಾಹನಗಳ ತಪಾಸಣೆ, ಕುಡಿದು ವಾಹನ ಚಾಲನೆ ಮಾಡಿದರೆ ದಂಡ, ಹೆಲ್ಮೆಟ್ ಬಳಸದೆ ಇದ್ದರೆ ದಂಡ, ಶಾಲೆ-ಕಾಲೇಜುಗಳ ಬಳಿ ದ್ವಿಚಕ್ರ ವಾಹನಗಳಲ್ಲಿ ಚೇಸ್ಟೆ ಮಾಡುವ ಪುಂಡರಿಗೆ ಕಡಿವಾಣ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದು ಅಪಘಾತ ತಡೆಗೆ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ತಾಲೂಕಿನಲ್ಲಿ ಸಂಭವಿಸುತ್ತಿರುವ ಅಪಘಾತಗಳ ತಡೆಗೆ ನಗರ ಠಾಣೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುತ್ತಿದ್ದಾರೆ. ಅಂತೆಯೇ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಅಧಿಕಾರಿಗಳು ಹೆಚ್ಚೆತ್ತು ಅಪಘಾತಗಳ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ತಾಲೂಕಿನ ಜನರ ಒತ್ತಾಸೆಯಾಗಿದೆ.