ದೊಡ್ಡಬಳ್ಳಾಪುರ (Doddaballapura): ಕಾರು ಡಿಕ್ಕಿ (Accident) ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗಳು ಗಾಯಗೊಂಡಿರುವ ಘಟನೆ ನಗರ ಒಕ್ಕಲಿಗರ ಸಮುದಾಯದ ಬಳಿ ಸಂಭವಿಸಿದೆ.
ಇಂದು ಬೆಳಗ್ಗೆ 9.30ರ ಸುಮಾರಿಗೆ ತಾಲೂಕು ಕಚೇರಿ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ತಾಯಿ ಮಂಜುಳ ಮತ್ತು ಮಗಳಾದ ಅನ್ನಪೂರ್ಣ ಎನ್ನುವವರು, ಒಕ್ಕಲಿಗರ ಸಮುದಾಯ ಭವನದ ಮುಂಭಾಗದ ತಿರುವು ಪಡೆಯುವ ವೇಳೆ, ಜಿ.ರಾಮೇಗೌಡ ವೃತ್ತದ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಮಹಿಳೆಯರು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ತೀವ್ರ ಪೆಟ್ಟಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಡಿಕ್ಕಿ ಹೊಡೆದ ಕಾರಿನ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಕ್ಕಿ ಹೊಡೆದು ಪರಾರಿಯಾದ ಕಾರಿನ ಪತ್ತೆಗೆ ಸಿಸಿ ಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಪ್ರಿಯದರ್ಶಿನಿ ಬಡಾವಣೆ ನಿವಾಸಿಗಳು ಎನ್ನಲಾಗುತ್ತಿದೆ.