ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕನ್ನೇ ಹೋಲುವ ಹೊಸ ವೈರಾಣು ಹೂಮನ್ ಮೆಟಾನ್ಯೂಮೊ ವೈರಸ್ (HMPV) ವ್ಯಾಪಕವಾಗಿ ಹರಡುತ್ತಿದ್ದು, ರೋಗಿಗಳಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ ಎಂದು ವರದಿಯಾಗಿದೆ.
ಈ ವೈರಸ್ ನಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗಿರುವುದರಿಂದ ಸ್ಮಶಾನಗಳೂ ಭರ್ತಿಯಾಗಿವೆ ಎಂದು ಖಾಸಗಿ ಸುದ್ದಿವಾಹಿನಿಗಳು ವರದಿ ಮಾಡುತ್ತಿದ. ಇದು ವಿಶ್ವದಾದ್ಯಂತ ಭೀತಿ ಹುಟ್ಟಿಸಿದೆ.
ಜ್ವರ ಹಾಗೂ ಕೋವಿಡ್-19 ಸೋಂಕಿನ ಗುಣಲಕ್ಷಣದಂತೆಯೇ ಇರುವ ಈ ಹೊಸ ಮಾದರಿಯ ವೈರಾಣು ಎಲ್ಲ ವಯೋಮಾನ ದವರನ್ನೂ ಬಾಧಿಸುವ ಲಕ್ಷಣ ಹೊಂದಿದೆ. ಆದಾಗ್ಯೂ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಸದ್ಯಕ್ಕೆ HMPVಗೆ ಯಾವುದೇ ಲಸಿಕೆ ಇಲ್ಲ.
ಚೀನಾದಲ್ಲಿನ ಈ ಕಳವಳಕಾರಿ ಬೆಳವಣಿಗೆಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಮುಂಜಾಗ್ರತೆ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.
ನ್ಯುಮೋನಿಯಾ ನಿರ್ವಹಣೆಗೆ ಪೈಲಟ್ ನಿರ್ವಹಣಾ ವ್ಯವಸ್ಥೆಯನ್ನು ಚೀನಾ ಜಾರಿಗೆ ತಂದಿದೆ.
ಚಳಿಗಾಲದಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಂಡುಬರುವುದರಿಂದ ಹಾಗೂ ಇದೇ ಸಂದರ್ಭದಲ್ಲಿ ಸೋಂಕು ಹರಡುವ ವೈರಾಣು ಪತ್ತೆಯಾಗಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಆದರೆ ಈವರೆಗೂ ಚೀನಾದ ಅಧಿಕಾರಿಗಳಾಗಲೀ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಾಗಲೀ ತುರ್ತು ಪರಿಸ್ಥಿತಿ ಘೋಷಿಸಿಲ್ಲ.
ಮತ್ತೊಂದೆಡೆ ಚೀನಾದ ರೋಗ ನಿಯಂತ್ರಣ ಕೇಂದ್ರವು ಸೋಂಕು ಇರುವುದನ್ನು ಖಚಿತಪಡಿಸಿದ್ದು, ಇದು ಉತ್ತರ ಚೀನಾದಲ್ಲಿ ವ್ಯಾಪಿಸಿದೆ.
ಪರಿಸ್ಥಿತಿ ಹದಗೆಟ್ಟಿದೆ. 14 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಬಾಧಿಸಿದೆ ಎಂದು ವರದಿಯಾಗಿದೆ.