ಬೆಂಗಳೂರು ಗ್ರಾಮಾಂತರ ಜಿಲ್ಲೆ: ರಾಷ್ಟ್ರ ಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆಯಾದರೆ, ಅಮರ ಶಿಲ್ಪಿ ಜಕಣಾಚಾರಿ ಅವರು ವಾಸ್ತು ಶಿಲ್ಪದ ಮೂಲಕ ಸಮಾಜಕ್ಕೆ ಕೊಡುಗೆಯಾಗಿದ್ದಾರೆ. ಅವರ ಆಚಾರ, ವಿಚಾರ, ಕಲೆ, ಕಾಯಕ ನಿಷ್ಠೆಯನ್ನು ಅರಿತು ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಜಿಲ್ಲಾಧಿಕಾರಿ (DC) ಡಾ.ಎನ್ ಶಿವಶಂಕರ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವಮಾನವ ದಿನಾಚರಣೆ ಮತ್ತು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ’ ಅಂಗವಾಗಿ ರಾಷ್ಟ್ರ ಕವಿ ಕುವೆಂಪು ಹಾಗೂ ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಿಲ್ಲಿಸಿ ಅವರು ಮಾತನಾಡಿದರು.
ರಾಷ್ಟ್ರ ಕವಿ ಕುವೆಂಪು ಅವರು ಜ್ನಾನಪೀಠ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಇನ್ನೂ ಹಲವು ಪ್ರಶಸ್ತಿ ಹಾಗೂ ಸ್ಥಾನಮಾನಗಳಿಗೆ ಭಾಜನರಾದವರು.
ಕುವೆಂಪು ಅವರ ಸಾಹಿತ್ಯ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ ರಾಷ್ಟ್ರದಾದ್ಯಂತ ಸಾಹಿತ್ಯ ಪಸರಿಸಿದೆ. ಕನ್ನಡ ಸಾಹಿತ್ಯಕ್ಕೆ, ಸಮಾಜ ಸುಧಾರಣೆಗೆ, ಜಾತ್ಯತೀತ ವ್ಯವಸ್ಥೆಗೆ ಅವರ ಕೊಡುಗೆ ಅಪಾರವಾದದ್ದು. ಇಡೀ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಪರಿಕಲ್ಪನೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಾಸ್ತು ಶಿಲ್ಪದ ಹರಿಕಾರ ಜಗತ್ತಿನ ಅದ್ಭುತ ಶಿಲ್ಪಗಳ ಸಾಲಿನಲ್ಲಿ ನಿಲ್ಲುವ ಜಕಣಾಚಾರಿ ಅವರು ಬೇಲೂರು ಮತ್ತು ಹಳೆಬೀಡು ಸೇರಿದಂತೆ ಇತರ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ. ಅವರ ವಾಸ್ತು ಶಿಲ್ಪ ಕಲೆಯು ಈಗಲು ಪ್ರಸ್ತುತ. ಅವರ ವಾಸ್ತು ಶಿಲ್ಪ ಕೆತ್ತನೆಗಳನ್ನು ಈಗಲೂ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ನಮ್ಮೊಳಗಿನ ಕಲೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂಬ ತತ್ವ ಸಾರಿದರು. ಅವರ ಗುಣ ಮತ್ತು ಬೆಳೆದು ಬಂದ ಪರಿಶ್ರಮದ ಘಟನೆಗಳನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುದು ಮುಖ್ಯ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎನ್ ಕೃಷ್ಣಪ್ಪ ಅವರು ‘ ಉಪನ್ಯಾಸ ನೀಡಿ ಕುವೆಂಪು ಅವರು ಎಲ್ಲರಿಗೂ ಚಿರಪರಿಚಿತರು, ಪ್ರತಿನಿತ್ಯ ಶಾಲಾ ಕಾಲೇಜುಗಳಲ್ಲಿ ಹಾಡುವ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯಲ್ಲಿ ಅವರು ಎಷ್ಟರ ಮಟ್ಟಿಗೆ ಪರಿಸರವನ್ನು ಪ್ರೀತಿಸುತ್ತಿದ್ದರು ಎಂದು ನಾವು ಕಾಣಬಹುದು, ಅದೇ ರೀತಿ ರೈತ ದೇಶದ ಬೆನ್ನೆಲುಬು ಅಂತ ಹೇಳಿ ರೈತರಿಗೋಸ್ಕರ ಒಂದು ಹಾಡನ್ನು ಬರೆದರು.
ನನ್ನ ಕನ್ನಡ ಭಾಷೆಯ ಮಹತ್ವವನ್ನು ಎಲ್ಲೆಡೆ ಸಾರಿದ ಮಹಾನ್ ವ್ಯಕ್ತಿ. ಬಹುಮುಖ್ಯವಾಗಿ ಕಥೆ ಕಾದಂಬರಿ ನಾಟಕ ಕವನಗಳ ಮೂಲಕ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ನಮಗೆ ಉಣಬಡಿಸಿದವರು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದವರು ಕುವೆಂಪು ಎಂದರು.
ವಾಸ್ತು ಶಿಲ್ಪ ಮತ್ತು ವಿಗ್ರಹ ಕೆತ್ತನೆಯಲ್ಲಿ ಚಿರಪರಿಚಿತರಾದ ಅಮರ ಶಿಲ್ಪಿ ಜಕಣಾಚಾರಿ ಅವರು ಬೇಲೂರು ಚನ್ನಕೇಶವ, ಹಳೇಬೀಡು ಸೋಮನಾಥೇಶ್ವರ ದೇವಾಲಾಯಗಳ ವಾಸ್ತು ಶಿಲ್ಪ ಕಲೆಯು ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರ್ತಿಸಲಾಗಿದೆ. ಅವರ ಕಲೆಗೆ ಬೆಲೆ ಕಟ್ಟಲಾಗದು. ವಾಸ್ತು ಶಿಲ್ಪ ಕಲೆಗೆ ಅವರ ಕೊಡುಗೆ ಅಸಾಮಾನ್ಯ ವಾದುದು ಎಂದರು.
ಕಾರ್ಯಕ್ರಮದಲ್ಲಿ ರಂಗ ಕಹಳೆ ಕಲಾ ತಂಡದಿಂದ ‘ಕುವೆಂಪು’ರವರ ಬೊಮ್ಮನಹಳ್ಳಿ ಕಿಂದರ ಜೋಗಿ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಅಧಿಕಾರಿಯಾದ ರಾಮಕೃಷ್ಣಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಡಿ.ಅಶೋಕಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕನ್ನಡಪರ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.