ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ BJPಯವ್ರು ನಮ್ಗೆ ನೀತಿ ಹೇಳೋಕೆ ಬರ್ತಾರೆ.. ಅವರ ಆಡಳಿತಾವಧಿಯಲ್ಲಿ ಮೂರು ಸಾವಿರ ಸಿಬ್ಬಂದಿಯನ್ನು ವಜಾ ಮಾಡಿ, ಸುಮಾರು ₹5900 ಕೋಟಿ ಸಾಲ ಮಾಡಿ ಹೋಗಿದ್ದಾರೆ ಹೀಗಾಗಿ ಬಸ್ ಟಿಕೆಟ್ ದರ ಶೇ.15ರಷ್ಟು ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga reddy) ಅವರು ದರ ಏರಿಕೆ ಕುರಿತಾಗಿ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು.
ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿಯೂ ಬಸ್ ಪ್ರಯಾಣದ ಟಿಕೆಟ್ ದರ ಹೆಚ್ಚಳಕ್ಕೆ ಸಂಬಂಧಿಸಿ ಇಂದು ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು 2020ರಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಸದ್ಯ ಶೇ.15ರಷ್ಟು ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದ್ದು, ಸಿಬ್ಬಂದಿ ವೆಚ್ಚ ಕೂಡ ಶೇ.18ರಷ್ಟು ಏರಿಕೆಯಾಗಿದೆ ಎಂದರು.
ಕಳೆದ 5-10 ವರ್ಷಗಳಿಂದ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಸಾರಿಗೆ ಸಂಸ್ಥೆಯೂ ಉಳಿಯಬೇಕಂದ್ರೆ ದರ ಹೆಚ್ಚಳ ಮಾಡಲೇಬೇಕಾಗುತ್ತದೆ. ಆದಾಯ ಹೆಚ್ಚಳವಾದರೂ ಕರ್ಚು ಏರಿಕೆಯಾಗಿದೆ. ಆದರೆ, ಮಹಿಳೆಯರಿಗಾಗಿ ಇರುವ ಶಕ್ತಿ ಯೋಜನೆಯಿಂದ ನಮಗೆ ಲಾಭ ಆಗಿದೆ.
ಬಿಜೆಪಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಸಾಲಬಿಟ್ಟು ಹೋಗಿದೆ. ನಮ್ಮ ಸರ್ಕಾರದಲ್ಲಿ ವೇತನಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಸಮಯಕ್ಕೆ ಸರಿಯಾಗಿ ನಮ್ಮ ಅವಧಿಯಲ್ಲಿ ಸಾರಿಗೆ ಸಿಬ್ಬಂದಿಗೆ ಸಂಬಳವಾಗುತ್ತಿದೆ. ಬಿಜೆಪಿ ಅವಧಿಯಲ್ಲಿ ವಜಾ ಗೊಂಡಿದ್ದ ಸಾರಿಗೆ ಸಿಬ್ಬಂದಿಗಳು ನಮ್ಮ ಸರ್ಕಾರದ ಅವಧಿಯಲ್ಲಿ ಮತ್ತೆ ಕೆಲಸಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಇದೇ ಜ.5ರಿಂದ ಬಸ್ ಟಿಕೆಟ್ ಪ್ರಯಾಣದ ದರ ಅನ್ವಯಿಸಲಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೂ ಈ ಹೊಸ ದರ ಅನ್ವಯಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.