ಚಾಮರಾಜನಗರ: ಸ್ವಂತ ಅಣ್ಣನೇ ತಂಗಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆಗೈದಿರುವ (Murder) ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.
ಐಮಾನ್ ಬಾನು ಎಂಬ ಯುವತಿ ಕೊಲೆಗೀಡಾದ ಸಹೋದರಿ. ಫರ್ಮಾನ್ ಪಾಷಾ ಕೊಲೆ ಆರೋಪಿ ಅಣ್ಣ ಎಂದು ವರದಿಯಾಗಿದೆ.
ತನ್ನ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ಅಣ್ಣ ತಂಗಿಯನ್ನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹೀಗೆ ತಂಗಿಗೆ ಹಲ್ಲೆ ಮಾಡುವ ವೇಳೆ, ದಾಳಿಯನ್ನು ತಡೆಯಲು ಅಡ್ಡ ಬಂದ ಅತ್ತಿಗೆಯ ಮೇಲೂ ಆರೋಪಿ ದಾಳಿ ಮಾಡಿದ್ದಾನೆ.
ಫರ್ಮಾನ್ ಪಾಷಾ ಎಂಬಾತ ರಾತ್ರಿ ಊಟ ಮುಗಿಸಿದ ನಂತರ ತನ್ನ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದ ಆದರೆ ಆ ಮಗುವಿಗೆ ಅದಾಗಲೇ ಜ್ವರವಿತ್ತು ಎನ್ನಲಾಗಿದೆ. ಹೀಗಾಗಿ ಮಗುವಿಗೆ ಸೌತೆಕಾಯಿ ತಿನ್ನಿಸ ಬೇಡ ಎಂದು ಅತ್ತಿಗೆ ತಸ್ಟೀಮ್ ತಾಜ್ ಮೊದಲಿಗೆ ಹೇಳಿದ್ದಾರೆ.
ಇದೇ ವೇಳೆ ಫರ್ಮಾನ್ ತಂಗಿ ಐಮಾನ್ ಭಾನು ಕೂಡ ಫರ್ಮಾನ್ ಗೆ ಇದೆ ವಿಚಾರಕ್ಕೆ ನಿಂದಿಸಿದ್ದಳು ಎನ್ನಲಾಗಿದೆ. ಇದ್ರಿಂದ ರೊಚ್ಚಿಗೆದ್ದಿದ್ದ ಆರೋಪಿ ಫರ್ಮಾನ್ ಪಾಷಾ ಮಾಂಸ ಕತ್ತರಿಸುವ ಕತ್ತಿಯಿಂದ ತಂಗಿ ಐಮಾನ್ ಕತ್ತನ್ನು ಕೊಚ್ಚಿದ್ದಾನೆ.
ಈ ವೇಳೆ ಅಡ್ಡಬಂದ ಅತ್ತಿಗೆ ಮತ್ತು ಅಣ್ಣನ ಮೇಲೂ ದಾಳಿ ನಡೆಸಿದ್ದು, ಗಲಾಟೆ ಕೇಳಿ ಸ್ಥಳೀಯರು ಬರುತ್ತಿದ್ದಂತೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಆ ಬಳಿಕ ತಾನೇ 112ಗೆ ಕರೆ ಮಾಡಿ ಪೊಲೀಸರನ್ನ ಮನೆಗೆ ಕರೆಸಿ ಫರ್ಮಾನ್ ಶರಣಾಗಿದ್ದಾನೆ.
ಸದ್ಯ ಗಂಭೀರ ಗಾಯಗೊಂಡ ದಂಪತಿಯನ್ನು ಚಾಮರಾಜನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.