ದೆಹಲಿ: ಉದ್ಯಮಿ, 40 ವರ್ಷ ವಯಸ್ಸಿನ ಪುನೀತ್ ಖುರಾನಾ ಅವರು ಇಲ್ಲಿನ ಕಲ್ಯಾಣ ವಿಹಾರ್‌ನ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ಉದ್ಯಮಿಯ ಪತ್ನಿ ಮತ್ತು ಆಕೆಯ ಸೋದರರು ನೀಡುತ್ತಿದ್ದ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಉದ್ಯಮಿಯ ತಂದೆ ಹಾಗೂ ಸಹೋದರಿ ಆರೋಪಿಸಿದ್ದಾರೆ.
ಖುರಾನಾ ಅವರ ತಂದೆ ತ್ರಿಲೋಕ್ ಅವರು ಉದ್ಯಮಿಯ ಮೊಬೈಲ್ ಫೋನ್ ಮತ್ತು ಇತರೆ ಪರಿಕರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗುತ್ತದೆ ಎಂದು ಡಿಸಿಪಿ ಬ್ರಿಶಂ ಸಿಂಗ್ ತಿಳಿಸಿದ್ದಾರೆ.
ಮೃತನ ತಂದೆ ಸುದ್ದಿಗಾರರ ಜೊತೆಗೆ ಮಾತನಾಡಿದ್ದು, ಮಗನಿಗೆ ಆತನ ಪತ್ನಿ ಮತ್ತು ಆಕೆಯ ಸೋದರರು ಕಿರುಕುಳ ನೀಡುತ್ತಿದ್ದರು. ಹಣಕಾಸು ಮತ್ತು ಆಸ್ತಿಯ ವಿಚಾರವಾಗಿ ಪ್ರತಿನಿತ್ಯವೂ ಜಗಳವಾಡುತ್ತಿದ್ದರು ಎಂದು ಆರೋಪಿಸಿದರು.
ಪತ್ನಿ ಮತ್ತು ಆಕೆಯ ತಂದೆ-ತಾಯಿ ನೀಡುತ್ತಿದ್ದ ಕಿರುಕುಳದಿಂದಲೇ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಖುರಾನಾ ಅವರ ಸಹೋದರಿ ಆರೋಪಿಸಿದರು.
ಸಹೋದರನ ಆತ್ಮಹತ್ಯೆ ವಿಷಯ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ತಿಳಿಯಿತು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. 2016 ಡಿಸೆಂಬರ್‌ನಲ್ಲಿ ಮದುವೆಯಾಗಿದ್ದು, ದಂಪತಿ 2 ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದರು.
ಪುನೀತ್ ಖುರಾನಾ ಅವರು ವುಡ್‌ಬಾಕ್ಸ್ ಕೆಫೆ ಸಹ ಮಾಲೀಕರಾಗಿದ್ದಾರೆ. ವ್ಯವಹಾರದ ವಿಚಾರವಾಗಿ ಖುರಾನಾ ದಂಪತಿ ನಡುವೆ ವೈಮನಸ್ಸು ಉಂಟಾಗಿ, ಅದು ವಿಚ್ಛೇದನದವರೆಗೂ ಹೋಗಿತ್ತು ಎನ್ನಲಾಗಿದೆ.