ಬೆಂಗಳೂರು: ವಿರೋಧ ಪಕ್ಷಗಳಿಂದ ಹಲವು ಆರೋಪ, ಅನುಮಾನದ ನಡುವೆಯೂ ಕೇಂದ್ರ ಚುನಾವಣಾ ಆಯೋಗ (Election commission) ದಿನಕಳೆದಂತೆ ನಿಯಮಾವಳಿಗಳನ್ನ ಬಿಗಿಗೊಳಿಸುತ್ತಿದೆ.
ಅದರಂತೆ ಆಸ್ತಿ ಘೋಷಣೆ ಮಾಡದ ಜನಪ್ರತಿನಿಧಿಗಳಿಗೆ ಚುನಾವಣಾ ಆಯೋಗವು (Election commission) ಬಿಗ್ ಶಾಕ್ ನೀಡಿದ್ದು, ರಾಜ್ಯದ 6 ಗ್ರಾಮಪಂಚಾಯಿತಿ ಸದಸ್ಯರ ಸದಸ್ಯತ್ವವನ್ನೇ ರದ್ದುಗೊಳಿಸಿದೆ.
ಆಸ್ತಿ ಘೋಷಣೆ ಸಂಬಂಧ ಈ ಸದಸ್ಯರಿಗೆ ನೋಟಿಸ್ ನೀಡಿದಾಗಲೂ ಯಾವುದೇ ಉತ್ತರ ನೀಡದ ಹಿನ್ನೆಲೆಯಲ್ಲಿ ಈ ಕ್ರಮ ಗೊಳ್ಳಲಾಗಿದೆ. ಅಲ್ಲದೆ ಸದಸ್ಯತ್ವ ರದ್ದುಗೊಂಡ ಸದಸ್ಯ ಸ್ಥಾನಗಳನ್ನು ಖಾಲಿ ಎಂದೂ ಘೋಷಿಸಿದೆ.
ಚಿಕ್ಕಮಗಳೂರು ಜಿಲ್ಲೆ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ಚೈತ್ರಾ ರಘು, ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಮ ಪಂಚಾಯಿತಿ ಎಸ್.ಎಚ್.ಚಂದ್ರಶೇಖರ್, ಕಲಬುರಗಿ ಜಿಲ್ಲೆ ಅಳಂದ ತಾಲೂಕು ಅಳಂಗ ಗ್ರಾಮ ಪಂಚಾಯಿತಿ ಗಣಪತಿ, ಕಮಲಾಪುರ ತಾಲೂಕು ವಿಕೆ.ಸಲಗ್ರಾಮ ಪಂಚಾಯಿತಿ ಇಸ್ಮಾಯಿಲ್ ಸಾಬ್, ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ತಾಲೂಕು ಪಂಚಾಯಿತಿ ಚಿಕ್ಕಮಗಳೂರು ಗ್ರಾಮ ಪಂಚಾಯಿತಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಕಲಕೇರಿ ಗ್ರಾಮ ಪಂಚಾಯಿತಿ ಬಿ.ವಿ. ಪ್ರಮೀಳಾ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳಡಿ ಆಸ್ತಿ ಘೋಷಣೆ ಮಾಡಿಕೊಳ್ಳದ ಸದಸ್ಯರ ಸದಸ್ಯತ್ವ ರದ್ದತಿಗೆ ಅವಕಾಶವಿದೆ.