Daily Story: ಮಹಾಭಾರತದಲ್ಲಿ ಒಂದೊಂದು ಪಾತ್ರವೂ ಒಂದೊಂದು ನೈಪುಣ್ಯವನ್ನು ಬಿಂಬಿಸುತ್ತದೆ. ವಿವೇಚನೆಗೆ ಧರ್ಮರಾಯನಾದರೆ, ಬಿಲ್ವಿದ್ಯೆಗೆ ಅರ್ಜುನ, ಬಲಪರಾಕ್ರಮಕ್ಕೆ ಭೀಮನಾದರೆ ಪ್ರತಿಜ್ಞೆಗೆ ಭೀಷ್ಮ ಪಿತಾಮಹರನ್ನು ಉದಾಹರಿಸಲಾಗುತ್ತದೆ. ಕಪಟತನಕ್ಕೆ ಶಕುನಿಯಾದರೆ ಶೌರ್ಯಕ್ಕೆ ಅಭಿಮನ್ಯು ಹೆಸರುವಾಸಿಯಾಗಿದ್ದಾರೆ.
ಇಡಿಯ ಮಹಾಭಾರತದಲ್ಲಿ ಸೌಂದರ್ಯಕ್ಕೆ ಯಾವುದೇ ಮಹತ್ವ ಕಂಡುಬರುವುದಿಲ್ಲ, ಕೇವಲ ಪರಾಕ್ರಮ, ವೀರಮರಣ, ನ್ಯಾಯ ನೀತಿ, ಮುಂತಾದ ಸತ್ಯಾಸತ್ಯತೆಗಳೇ ಹೆಚ್ಚಾಗಿ ನಮಗೆ ಕಂಡುಬರುತ್ತದೆ. ಇಲ್ಲಿ ಮನುಷ್ಯನ ಬಾಹ್ಯರೂಪಕ್ಕಿಂತಲೂ ಆಂತರಿಕ ಗುಣಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಮಹಾಭಾರತ ಕಲಿಸುವ ಸತ್ಯ.
ಅರ್ಜುನ ಮತ್ತು ಸುಭದ್ರೆಯ ಮಗ ಅಭಿಮನ್ಯುನೇ ಇಂದಿನ ನಮ್ಮ ಲೇಖನದ ಕಥಾನಾಯಕ. ಬಿಲ್ವಿದ್ಯೆಯಲ್ಲಿ ಅತ್ಯಂತ ಪ್ರಾವೀಣ್ಯತೆಯನ್ನು ಹೊಂದಿದ್ದ ಈತ ಪಾಂಡವರಲ್ಲೇ ಕಳಶವಿಟ್ಟಂತಹ ವ್ಯಕ್ತಿತ್ವ ಹೊಂದಿದ್ದ.
ಒಮ್ಮೆ ಸುಭದ್ರೆ ಅಭಿಮನ್ಯುವನ್ನಿನ್ನೂ ಗರ್ಭದಲ್ಲಿಟ್ಟುಕೊಂಡಿದ್ದಾಗ ಕೃಷ್ಣನು ಯುದ್ಧದ ಅತ್ಯಂತ ಕ್ಲಿಷ್ಟಕರವಾದ ಚಕ್ರವ್ಯೂಹದ ಬಗ್ಗೆ ವಿವರ ನೀಡುತ್ತಿದ್ದ. ಇದರಲ್ಲಿ ವೃತ್ತಕಾರದಲ್ಲಿ ಸೈನ್ಯ ವ್ಯೂಹ ರಚಿಸುವುದು, ಅದರೊಳಗೆ ನುಸುಳುವುದು ಎಷ್ಟು ಕಷ್ಟವೋ ಅದರಿಂದ ಜೀವಸಹಿತ ಹೊರಬರುವುದು ಇನ್ನೂ ಕಷ್ಟ. ವ್ಯೂಹದೊಳಗೆ ನುಗ್ಗುವ ಪರಿಯನ್ನು ಹೇಳುತ್ತಿದ್ದಂತೆಯೇ ಗರ್ಭದಲ್ಲಿದ್ದ ಅಭಿಮನ್ಯು ಇದನ್ನು ಕೇಳಿಸಿಕೊಂಡು ತನ್ನ ಮನದಾಳದಲ್ಲಿ ಆಗಲೇ ಸ್ಥಾಪಿಸಿದ್ದ.
ಎಲ್ಲವನ್ನು ಬಲ್ಲ ಕೃಷ್ಣ ಕಥೆಯನ್ನು ಅರ್ಧದಲ್ಲೇ ನಿಲ್ಲಿಸಿದ…! ಆದರೆ ಅಷ್ಟು ಹೊತ್ತಿಗೆ ದಣಿವಿನಿಂದ ನಿದ್ದೆಗೆ ಜಾರಿದ ಸುಭದ್ರೆ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ.
ಸುಭದ್ರೆ ನಿದ್ದೆಹೋದುದನ್ನು ತಿಳಿದ ಕೃಷ್ಣನು ತನ್ನ ಮಾತುಗಳನ್ನು ಅಲ್ಲಿಗೇ ನಿಲ್ಲಿಸಿದ. ಇದರಿಂದ ಅಭಿಮನ್ಯುವಿಗೆ ಚಕ್ರವ್ಯೂಹದಿಂದ ಹೊರಬರುವ ಮಾಹಿತಿ ಸಿಗದೇ ಹೋಯಿತು. ಮುಂದಿನ ಮಾಹಿತಿ ಸಿಗುವಂತೆ ಗರ್ಭದಲ್ಲಿಯೇ ಒದ್ದಾಗ ಸುಭದ್ರೆಗೆ ಎಚ್ಚರವಾದರೂ ಆಗ ತಡವಾಗಿತ್ತು. ಕೃಷ್ಣನು ತನ್ನ ಮಾತುಗಳನ್ನು ನಿಲ್ಲಿಸಿಯಾಗಿತ್ತು..!
ಈ ವೇಳೆಗೆ ಪಾಂಡವರ ಮತ್ತು ಕೌರವರ ನಡುವೆ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗಿತ್ತು. ಮಹಾಭಾರತ ಯುದ್ಧ ಪ್ರಾರಂಭವಾದಾಗ ಅಭಿಮನ್ಯುವಿಗೆ ಕೇವಲ 16 ವರ್ಷ ವಯಸ್ಸು. ಆತನು ಅತ್ಯಂತ ಪರಾಕ್ರಮಿಯಾಗಿದ್ದರೂ ಶತ್ರುಗಳು ಈತನಿಗಿಂತ ಹೆಚ್ಚು ಅನುಭವ ಹಾಗೂ ತಂತ್ರಗಾರಿಕೆಯನ್ನು ಹೊಂದಿದ್ದು, ಈತನಿಗೆ ಯುದ್ಧದಲ್ಲಿ ಏಕಾಂಗಿಯಾಗಿ ಹೋರಾಡಲು ಹೆಚ್ಚಿನ ತರಬೇತಿ ಹಾಗೂ ಅನುಭವದ ಕೊರತೆಯಿತ್ತು.
ಅತೀ ಮುಖ್ಯವಾದ ಸಂಗತಿಯೆಂದರೆ, ಕುರುಕ್ಷೇತ್ರ ಯುದ್ಧ 13ನೇ ದಿನವಾದ ಅಂದು ಆತನು ಪಾಂಡವರ ಜಯದ ಹಾಗೂ ಸೋಲಿನ ನಡುವಿನ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನು. ಈತನಿಲ್ಲದಿದ್ದರೆ ಯುಧಿಷ್ಟಿರನು ಕೌರವರ ಮುಷ್ಠಿಗೆ ಬಲಿಯಾಗಿ ಹೋಗುತ್ತಿದ್ದನು ಹಾಗೂ ಪಾಂಡವರ ಸೋಲು ಖಚಿತವಾಗುತ್ತಿತ್ತು.
ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಬೇಧಿಸುವ ತಂತ್ರಗಾರಿಕೆಯ ಕೊಂಚ ಮಾತ್ರ ತಿಳಿದಿತ್ತು. ಯುದ್ಧದಲ್ಲಿ ಎದುರಿಗೆ ಬಂದವರ ಮೇಲೆ ನಿರಾಯಾಸವಾಗಿ ದಾಳಿ ಮಾಡುತ್ತಿದ್ದನು. ಹಾಗೇ ಚಕ್ರವ್ಯೂಹದ ಒಳಕ್ಕೆ ನುಗ್ಗಿದಾಗ ಅವನಿಗೆ ನಂತರ ಅನುಸರಿಸಬೇಕಾದ ವಿಧಾನವು ಹೊಳೆಯಲಿಲ್ಲ. ಆತನಿಗೆ ಚಕ್ರವ್ಯೂಹದ ಒಳಕ್ಕೆ ನುಗ್ಗುವ ತಂತ್ರವು ಮಾತ್ರ ಗೊತ್ತಿದ್ದು, ಅದರಿಂದ ಜಯಶಾಲಿಯಾಗಿ ಹೊರಬರುವ ವಿದ್ಯೆ ತಿಳಿದಿರಲಿಲ್ಲ. ಆದ್ದರಿಂದಲೇ, ಆತ ವಿವಿಧ ವಿಧಾನದಲ್ಲಿ ಮುನ್ನುಗ್ಗದೇ, ಏನೂ ತೋಚದೆ ನಿಂತಲ್ಲಿಯೇ ಎದುರಾಳಿಗಳೊಂದಿಗೆ ಹೋರಾಡುವ ಸ್ಥಿತಿ ಒದಗಿತು.
ಹೀಗಿರುವಾಗ ಪಾಂಡವರ ಸೈನ್ಯವಾಗಲೀ ಅಥವಾ ಅವನ ಬುದ್ಧಿಶಕ್ತಿಯಾಗಲೀ ಸಹಾಯಕ್ಕೆ ಬರಲಿಲ್ಲ. ಕೊನೆಯದಾಗಿ ಚಕ್ರವ್ಯೂಹದಲ್ಲೇ ಏಕಾಂಗಿಯಾಗಿ ಹೋರಾಡಿ ವೀರಮರಣವನ್ನಪ್ಪಿದನು.
ಇಂದಿಗೂ ಅಭಿಮನ್ಯುವಿನ ಹೋರಾಟ ಮತ್ತು ಪರಾಕ್ರಮ ಮಹಾಭಾರತದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
ಕೃಪೆ; ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ) ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಸಾಂದರ್ಭಿಕ ಚಿತ್ರ ಬಳಸಲಾಗಿದೆ