ಢಾಕಾ: ರ್ಯಾಲಿಯಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜವನ್ನು ಎತ್ತಿದ ಆರೋಪದ ಮೇಲೆ ದೇಶದ್ರೋಹ ಆರೋಪ ಹೊತ್ತಿರುವ ಪ್ರಕರಣದಲ್ಲಿ ಬಂಧಿತರಾಗಿ 42 ದಿನಗಳಿಂದ ಜೈಲಿನಲ್ಲಿರುವ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ (Chinmoy Das) ಅವರಿಗೆ ಜಾಮೀನು ನೀಡಲು ಸ್ಥಳೀಯ ನ್ಯಾಯಾಲಯ ನಿರಾಕರಿಸಿದೆ.
ನವೆಂಬರ್ 25ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಸ್ ಅವರನ್ನು ಬಂಧಿಸಲಾಗಿತ್ತು.
ಢಾಕಾ ಮತ್ತು ಚಿತ್ತಗಾಂಗ್‌ನ 20 ವಕೀಲರ ತಂಡ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ ಚಿನ್ಮಯ್ ಕೃಷ್ಣ ದಾಸ್ ಅವರ ವಿರುದ್ಧ ಸುಳ್ಳು ಮತ್ತು ಕಪೋಲಕಲ್ಪಿತ ಆರೋಪಗಳನ್ನು ಹೊರಿಸಲಾಗಿದೆ ಎಂದು ವಾದಿಸಿದ್ದರು.
ಮಧುಮೇಹ ಮತ್ತು ಉಸಿರಾಟದ ಸಮಸ್ಯೆಗಳಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ದಾಸ್ ಅವರನ್ನು ಬಂಧನದಲ್ಲಿಟ್ಟಿರುವುದು ಕಾನೂನುಬಾಹಿರ ಎಂದು ಅವರ ವಕೀಲರು ವಾದಿಸಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ತಿರಸ್ಕರಿಸಿ ಆದೇಶ ಹೊರಡಿಸಿದೆ.
ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಿರುವುದಾಗಿ ಚಿನ್ಮಯ್ ಪರ ವಕೀಲ ಅಪೂರ್ವ ಕುಮಾರ್ ಭಟ್ಟಾಚಾರ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಂಧನಕ್ಕೆ ಕಾರಣ: ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯಾದಾಗಿನಿಂದ, ಹಿಂದೂಗಳು ಮತ್ತು ಇತರ ಅಲ್ಪ ಸಂಖ್ಯಾತ ಸಮುದಾಯಗಳ ವಿರುದ್ಧ ನಿರಂತರ ಹಿಂಸಾಚಾರ ನಡೆಯುತ್ತಿದೆ. ಈ ಘಟನೆಗಳನ್ನು ವಿರೋಧಿಸಿ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಚಿನ್ಮಯ್ ಕೃಷ್ಣ ದಾಸ್ ಪ್ರಮುಖ ಪಾತ್ರ ವಹಿಸಿದ್ದರು.
ಚಿತ್ತಗಾಂಗ್ ಪ್ರತಿಭಟನಾ ಸಭೆಯಲ್ಲಿ ಚಿನ್ಮಯ್ ಕೃಷ್ಣ ದಾಸ್ ಮತ್ತು 18 ಜನ ಅಲ್ಲಿ ರಾಷ್ಟ್ರ ಧ್ವಜಕ್ಕಿಂತ ಎತ್ತರಕ್ಕೆ ಕೇಸರಿ ಧ್ವಜ ಹಾರಿಸಿದ್ದು, ಆ ಮೂಲಕ ರಾಷ್ಟ್ರದ್ರೋಹದ ಕೆಲಸ ಮಾಡಿದ್ದಾರೆ ಎಂದು ಎಂ ಡಿ ಫಿರೋಜ್ ಖಾನ್ ಎಂಬುವವರು ದೂರು ದಾಖಲಿಸಿದರು.