ಹಾಸನ; ಕೌಟುಂಬಿಕ ಕಲಹದಿಂದ ಬೇಸತ್ತ ಇಂಜಿನಿಯರೊಬ್ಬರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದು, ಇಂದು ಶೆಟ್ಟಿಹಳ್ಳಿ ಬಳಿ ಶವ ಪತ್ತೆಯಾಗಿದೆ.
ಮೃತರನ್ನು ನಗರದ ಇಂದಿರಾನಗರ ಬಡಾವಣೆ ನಿವಾಸಿ ಪ್ರಮೋದ್.ಜಿ.ಜೆ. (35 ವರ್ಷ) ಎಂದು ಗುರುತಿಸಲಾಗಿದೆ. ಶೆಟ್ಟಿಹಳ್ಳಿ ಬಳಿಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಡಿ.29 ರಂದು ಪ್ರಮೋದ್, ಮನೆಯಲ್ಲಿಯೇ ಮೊಬೈಲ್ ಫೋನ್ ಬಿಟ್ಟು ಹೊರ ಹೋಗಿದ್ದರು. ತಡ ರಾತ್ರಿಯಾದರೂ ಮನೆಗೆ ವಾಪಸು ಬಾರದ ಹಿನ್ನೆಲೆಯಲ್ಲಿ ಅವರ ಪೋಷಕರು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಹೇಮಾವತಿ ನದಿಯ ಸೇತುವೆ ಬಳಿ ಪ್ರಮೋದ್ ಅವರ ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಪಾಸ್‌ಬುಕ್‌ಗಳ ವಿವರ ಪರಿಶೀಲಿಸಿದ ಸ್ಥಳೀಯರು ಪೋಷಕರಿಗೆ ಮಾಹಿತಿ ನೀಡಿದ್ದರು.
ಡಿ.30 ರಿಂದ ಪೊಲೀಸರು ನದಿ ಶೋಧ ಕಾರ್ಯಾಚರಣೆಯಲ್ಲಿ ಆರಂಭಿಸಿದ್ದರು. ಇಂದು (ಜನವರಿ 1) ಬೆಳಿಗ್ಗೆ ಪ್ರಮೋದ್ ಅವರ ಶವ ನದಿಯಲ್ಲಿ ತೆಲೆಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.