ಬೆಂಗಳೂರು: ರಾಜ್ಯ ಸರಕಾರಿ ನೌಕರರ ಬಹುದಿನದ ಬೇಡಿಕೆ ಹಾಗೂ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರಕಾರದ ಪ್ರಮುಖ ಘೋಷಣೆಯಾಗಿದ್ದ ಒಪಿಎಸ್ ಜಾರಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Cmsiddaramaiah) ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಸಂಘದ ಪದಾಧಿಕಾರಿಗಳ ನಿಯೋಗ, ಒಪಿಎಸ್ ಮರುಜಾರಿಗೆ ಮನವಿ ಮಾಡಿದ್ದಾರೆ. ಇದರೊಂದಿಗೆ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಪದಾಧಿಕಾರಿಗಳಿಂದ ಸಿಎಂ ಭೇಟಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸಂಘದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಜಿಲ್ಲೆ, ತಾಲೂಕು ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ನಿಯೋಗದೊಂದಿಗೆ ಸಿಎಂರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
ಇದೇ
ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರ ರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿ ಸುವ ಸಂಬಂಧ ಸರಕಾರದಿಂದ ರಚಿತವಾಗಿರುವ ಅಧಿಕಾರಿಗಳ ಸಮಿತಿಯಿಂದ ಶೀಘ್ರ ವರದಿ ಪಡೆದು ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಮನವಿ ಮಾಡಲಾಯಿತು. ಈ ವಿಷಯವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಗಳು ಸಮಿತಿಯಿಂದ ಶೀಘ್ರ ವರದಿ ಪಡೆದು ಈಡೇರಿಸುವ ಭರವಸೆ ನೀಡಿದ್ದಾರೆ.
ಅಲ್ಲದೇ, ರಾಜ್ಯ ಸರಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಉಚಿತ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾ ಗೊಳಿಸುವ ಭರವಸೆ ನೀಡಿದರು.
ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಎಸ್ ಷಡಾಕ್ಷರಿಗೆ ಮುಖ್ಯಮಂತ್ರಿ ಶುಭ ಹಾರೈಸಿದರು. ಅಲ್ಲದೆ, ಸಂಘದ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿ ರಾಜ್ಯದ ಸಮಸ್ತ ಸರಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾದ ರಮೇಶ್ ಸಂಗಾ, ಕೊಪ್ಪಳ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ರಾಮನಗರ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಕೆಲವು ತಾಲೂಕು ಸಂಘಗಳ ಅಧ್ಯಕ್ಷರು- ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ರಾಜ್ಯಾಧ್ಯಕ್ಷರ ನಿಯೋಗದಲ್ಲಿದ್ದರು.