ಮಡಿಕೇರಿ (video): ಮರಗೋಡಿನ ಕಟ್ಟೆ ಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯಕ್ಕೆ ಕೊಡವ ಸಾಂಪ್ರದಾಯಿಕ ಉಡುಪು ‘ಕುಪ್ತಚೇಲೆ’ ಧರಿಸಿ ಬಂದವರಿಗೆ ಆಲಯ ಪ್ರವೇಶ ನಿರಾಕರಿಸಿದ ಪ್ರಕರಣ ಕೊಡಗು ಜಿಲ್ಲಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಶನಿವಾರ ವಿವಿಧ ಸಂಘಟನೆಗಳು ಸುದ್ದಿಗೋಷ್ಠಿ ನಡೆಸಿ, ಸದ್ಯದಲ್ಲಿಯೇ ‘ಕೊಡವರ ನಡೆ ಕಟ್ಟೆಮಾಡು ಕಡೆ’ ಹೆಸರಿನಲ್ಲಿ ಬೃಹತ್ ಜಾಥಾ ನಡೆಸುವು ದಾಗಿ ಎಚ್ಚರಿಸಿವೆ.
ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿಕೆ ನೀಡಿ, ‘ಸಂಘರ್ಷಕ್ಕೆ ಅವಕಾಶ ಮಾಡುವುದು ಸರಿಯಲ್ಲ. ಭಕ್ತಾದಿಗಳು ದೇವರಿಗೆ ಅಪಚಾರವಾಗುವಂಥ ಉಡುಪು ಧರಿಸಿ ದೇವಾಲಯಕ್ಕೆ ಹೋಗಬಾರದು, ಆದರೆ ಕೊಡವ ಸೇರಿದಂತೆ ವಿವಿಧ ಜನಾಂಗದವರು ತಮ್ಮ ಹಬ್ಬಗಳ ಆಚರಣೆಯ ಸಂದರ್ಭ ಅವರ ಸಾಂಪ್ರದಾಯಿಕ ಉಡುಪು ಧರಿಸಿ ಭಕ್ತಿ ಸಮ ರ್ಪಣೆ ಮಾಡುವುದು ಹೊಸತಲ್ಲ.
ಕಟ್ಟಿಮಾಡು ದೇವಾಲಯದಲ್ಲಿ ಉಪ ನಿಯಮಗಳನ್ನು (ಬೈಲಾ) ಅಳವಡಿಸಿದ್ದು ಕೊಡವ ಉಡುಪು ಧರಿಸಿ ಬಂದವರನ್ನು ತಡೆದಿದ್ದಾರೆ. ಅಂತಹ ಬೈಲಾಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಿ ಅವಕಾಶ ಮಾಡಿಕೊಡಬೇಕು” ಎಂದು ದೇವಾಲಯ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಅರೆಕಾಡು ಹೊಕ್ಕೇರಿಯ ‘ಕೊಡವ ವೆಲ್ ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್’ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಪತ್ರಿಕಾ ಪ್ರಕಟಣೆ ನೀಡಿ, ಕುಪ್ಪಚೇಲೆ ಧರಿಸುವ ಕೊಡವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದು, ಕಟ್ಟೆಮಾಡು ಪ್ರಕರಣವನ್ನು ಖಂಡಿಸಿದ್ದಾರೆ.
‘ಕೊಡವರ ನಡೆ ಕಟ್ಟೆಮಾಡು ಕಡೆ’ ಬೃಹತ್ ಜಾಥಾಕ್ಕೆ ತಮ್ಮ ಸಂಘಟನೆ ಬೆಂಬಲ ನೀಡಿ ಭಾಗವಹಿಸಲಿದೆ ಎಂದು ಅವರು ಘೋಷಿಸಿದ್ದಾರೆ. ವಿರಾಜಪೇಟೆ ಕೊಡವ ಸಮಾಜ, ಕಟ್ಟೆಮಾಡು ಶ್ರೀ ಭದ್ರಕಾಳಿ ದೇವಾಲಯ ಆಡಳಿತ ಮಂಡಳಿ, ಜಟ್ಟೂಮಿ ಸಂಘಟನೆ, ‘ಕನೆಕ್ಟಿಂಗ್ ಕೊಡವಾಸ್’ ಸಂಘಟನೆಗಳು ಜಾಥಾ ಕುರಿತು ಜಂಟಿ ಸುದ್ದಿಗೋಷ್ಟಿ ನಡೆಸಿವೆ.