ದೊಡ್ಡಬಳ್ಳಾಪುರ: ರಾಷ್ಟ್ರಕವಿ ಕುವೆಂಪು (Kuvempu) ನಮ್ಮನ್ನಗಲಿ ದಶಕಗಳಾದರೂ ಅವರ ಅಕ್ಷರದ ಕಂಪು ನಮ್ಮನ್ನು ಇಂದಿಗೂ ಬಿಟ್ಟಿಲ್ಲ. ಕನ್ನಡ ಜನತೆ ಕುವೆಂಪು ಅವರನ್ನು ಮರೆತಿಲ್ಲ ಎಂಬುದಕ್ಕೆ ಅವರ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಕವಿಗೆ ವ್ಯಕ್ತವಾಗುತ್ತಿರುವ ಪ್ರೀತಿಯೇ ಸಾಕ್ಷಿ.
ನಗರದ ತಾಲೂಕು ಕಚೇರಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಶೋಕಾಚರಣೆ ಕಾರಣ ಇಂದು ಕುವೆಂಪು ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕನ್ನಡದ ಅಗ್ರಮಾನ್ಯ ಕವಿ, ನಾಟಕಕಾರ, ವಿಮರ್ಷಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್, ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿಎಸ್ ಚಂದ್ರಶೇಖರ್, ಮಹಿಳಾ ಮುಖಂಡರಾದ ನಾಗರತ್ನಮ್ಮ ಮತ್ತಿತರರಿದ್ದರು.