ಪಾಂಡವಪುರ (Video): ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಪಾಳಕ್ಕೆ ಹೊಡೆದ ಕಾರಣ ಯುವಕನೊಬ್ಬ ತಿರುಗಿ ಕಾನ್‌ಸ್ಟೆಬಲ್ ಒಬ್ಬರ ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿದ ಘಟನೆ ಶನಿವಾರ ನಡೆದಿದೆ.
ಈ ವೇಳೆ ಇತರೆ ಪೊಲೀಸ್ ಸಿಬ್ಬಂದಿಯೊಂದಿಗೂ ಘರ್ಷಣೆ ನಡೆದಿದ್ದು, ಘಟನೆಯ ವಿಡಿಯೊ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಹಿರೋಡೆ ಬೀದಿಯ ಸಾಗರ್ (30) ಹಲ್ಲೆ ಮಾಡಿದ ಆರೋಪಿ ಎನ್ನಲಾಗಿದೆ. ಜಮೀನು ವಿವಾದದ ಸಂಬಂಧ ಪಟ್ಟಣದ ಲಕ್ಷ್ಮೀನಾರಾಯಣ ಎಂಬವರು ಆರೋಪಿ ವಿರುದ್ಧ ದೂರು ದಾಖಲಿಸಿದ್ದರಿಂದ, ಇಬ್ಬರನ್ನೂ ಠಾಣೆಗೆ ಕರೆಸಿದ ವೇಳೆ ಘಟನೆ ನಡೆದಿದೆ.
‘ಠಾಣೆಯ ಆವರಣದಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಆಗ ಮಧ್ಯಪ್ರವೇಶಿಸಿದ ಕಾನ್‌ಸ್ಟೆಬಲ್ ಅಭಿಷೇಕ್, ಆರೋಪಿಯ ಕಪಾಳಕೆ ಬಾರಿಸಿದ್ದಾರೆ. ಅದರಿಂದ ಮತ್ತಷ್ಟು ಕೋಪಗೊಂಡ ಆರೋಪಿಯು ತಿರುಗಿ ಬಾರಿಸಿದ್ದಲ್ಲದೆ, ಅವರ ಕೊರಳಪಟ್ಟಿಯನ್ನೇ ಹಿಡಿದಿದ್ದಾನೆ.
ಅಲ್ಲಿಯೇ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ಗಳಾದ ಲಕ್ಷ್ಮೀ ಮತ್ತು ಆನಂದ ಅವರು ಜಗಳ ಬಿಡಿಸಲು ಮುಂದಾದಾಗಲೂ, ಅವರಿಗೂ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಟೇಬಲ್ ಮೇಲಿದ್ದ ದಾಖಲೆಗಳೂ ಹಾಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಭಿಷೇಕ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದಿದ್ದಾರೆಂದು ವರದಿಯಾಗಿದೆ.