ಮುರುಡೇಶ್ವರ: ಶಾಲಾ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಬಾಲಕಿಯರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮುರುಡೇಶ್ವರ (Murudeshwara beach) ಬೀಚ್ ಹೇರಿದ್ದ ತಾತ್ಕಾಲಿಕ ನಿರ್ಭಂದವನ್ನು 19 ದಿನಗಳ ಬಳಿಕ ಸಡಿಲಗೊಳಿಸಲಾಗಿದೆ.
ಮುಳಬಾಗಲು ತಾಲೂಕಿನ ಕೊತ್ತೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿನಿಯರು ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದರು.
ನಾಲ್ವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಸಾವನ್ನಪ್ಪಿದ ಬಳಿಕ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಯಂತ್ ವಿರುದ್ಧ ದೂರು ದಾಖಲಾಗಿತ್ತು.
ಈ ಬೆನ್ನಲ್ಲೇ ಮುರುಡೇಶ್ವರ ಬರುವ ಪ್ರವಾಸಿಗರಿಗೆ ಕಡಲತೀರಕ್ಕೆ ತೆರಳುವುದನ್ಮು ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು.
ಮುರುಡೇಶ್ವರಕ್ಕೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದ ಕೂಡ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಈ ಘಟನೆಯ ಬಳಿಕವಂತು ಎಲ್ಲಾ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಸಾಕಷ್ಟು ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿತ್ತು.
ಆದರೆ ಇದೀಗ ಕ್ರಿಸ್ ಮಸ್ ಗೆ ಎರಡು ದಿನ ಬಾಕಿ ಇರುವಂತೆ ನಿರ್ಬಂಧವನ್ನು ಸಡಿಲಗೊಳಿಸಿದ್ದು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಡಲಲ್ಲಿ ಆಟವಾಡುತ್ತಿದ್ದಾರೆಂದು ವರದಿಯಾಗಿದೆ.