ಬೆಂಗಳೂರು: ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯ ದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರಘಟನೆಯ ವಿರುದ್ಧ ಹೋರಾಟಕ್ಕಿಳಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (annamalai_k) ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು,ದೈವಶ್ರದ್ಧೆ, ಆಚಾರ ವಿಚಾರಗಳು ನಂಬಿಕೆಯನ್ನು ಆಧರಿಸಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ಅವರು ತಮ್ಮ ನಂಬಿಕೆಯನ್ನು ಆಧರಿಸಿ ದೈವ ಶ್ರದ್ಧೆಯನ್ನು ಪ್ರದರ್ಶಿಸುವ ಮೂಲಕ ತಮಿಳುನಾಡಿನ ಅಣ್ಣಾ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಘಟನೆಯ ವಿರುದ್ಧ ಹೋರಾಟಕ್ಕಿಳಿದು ‘ದಾಷ್ಟ್ಯತನದಿಂದ ವರ್ತಿಸುತ್ತಿರುವ’ ಡಿಎಂಕೆ ಸರ್ಕಾರವು ಆರೋಪಿತ ದುಷ್ಕರ್ಮಿಗಳ ವಿರುದ್ಧ ಕಾನೂನಿನ ಚಾಟಿ ಬೀಸದ ಧೋರಣೆಯನ್ನು ಪ್ರತಿಭಟನಾ ಸೂಚಕವಾಗಿ ದೈವಶ್ರದ್ಧೆಯ ಚಾಟಿ ಏಟು ಬಾರಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಈ ಪ್ರತಿಭಟನೆಯನ್ನು ಕೆಲವು ವಿಕೃತಿಗಳು ವಿಡಂಬನೆ ಮಾಡುತ್ತಿವೆ, ಸ್ತ್ರೀ ಕುಲದ ರಕ್ಷಣೆಗಾಗಿ, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಲು ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಕ್ರಮವನ್ನು ನಾವೆಲ್ಲರೂ ಬೆಂಬಲಿಸಬೇಕಿದೆ.
ಈ ಸಂಬಂಧ ವಿಕೃತಿ ಮೆರೆಯುವವರ ಹೇಳಿಕೆ ಹಾಗೂ ವರ್ತನೆಯನ್ನು ಖಂಡಿಸಬೇಕಿದೆ ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.