ಚಿಕ್ಕಬಳ್ಳಾಪುರ: ಬುರ್ಖಾ ಧರಿಸಿಕೊಂಡು ಬಸ್ ಗೆ ಹತ್ತಿದ್ರೆ ಸಾಕು ಆ ಮೂರ್ನಾಲ್ಕು ಮಂದಿ ಮಹಿಳೆಯರು ಬಸ್ ನಲ್ಲಿ ಮಹಿಳೆಯರ ಕತ್ತಲ್ಲಿರೋ ಚಿನ್ನದ ಸರ ಹಾಗೂ ಬ್ಯಾಗ್ ಗಳಲ್ಲಿರೋ ಕ್ಯಾಷ್ ಎಗರಿಸದೆ (theft) ಬಸ್ ನಿಂದ ಕೆಳಗೆ ಇಳಿತಿರಲಿಲ್ಲ.. ಇಂತಹ ಖತರ್ನಾಕ್ ಬುರ್ಖಾಧಾರಿ ಮೂವರು ಕಿಲಾಡಿ ಮಹಿಳಾ ಕಳ್ಳಿಯರನ್ನ ಜಿಲ್ಲೆಯ ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೆ ಗುಲ್ಬರ್ಗಾ ಮೂಲದ ರೇಖಾ ಬಾಯಿ, ಕರೀನಾ, ರೋಜಾ ಬಂಧಿತರಾಗಿದ್ದು ಪುಷ್ಪ ತಲೆಮರೆಸಿಕೊಂಡಿದ್ದಾಳೆ.
ಅಂದಹಾಗೆ ಈ ನಾಲ್ವರಲ್ಲಿ ಪುಷ್ಪ ಹಾಗೂ ರೇಖಾ ಅಕ್ಕ ತಂಗಿಯರಾಗಿದ್ದು, ರೋಜಾ ಹಾಗೂ ಕರೀನಾ ಸಹ ಸಹೋದರಿಯರಾಗಿದ್ದಾರೆ.
ಈ ನಾಲ್ವರು ಒಂದೇ ಕುಟುಂಬದವರಾಗಿದ್ದು ಬಸ್ ನಿಲ್ದಾಣ ಜನಸಂದಣಿ ಪ್ರದೇಶಗಳಲ್ಲಿ ಕಳವು ಮಾಡೋದೆ ಇವರ ಕಾಯಕ. ಇದೇ ರೀತಿ ನವೆಂಬರ್ 16 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಬಸ್ ನಿಲ್ದಾಣದಲ್ಲಿ ಶಾಂತಕುಮಾರಿ ಎಂಬಾಕೆ ಬೆಂಗಳೂರು ಬಸ್ ಹತ್ತುವ ಸಮಯದಲ್ಲಿ ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಎರಡು ಎಳೆ ಚಿನ್ನದ ಸರ ಕಳವು ಮಾಡಿದ್ರು.
ಅದೇ ದಿನ ರತ್ನಮ್ಮ ಎಂಬಾಕೆಯ ಬ್ಯಾಗ್ ನಲ್ಲಿದ್ದ 1 ಲಕ್ಷ ಹಣ ಸಹ ಎಗರಿಸಿ ಎಸ್ಕೇಪ್ ಆಗಿದ್ರು.
ಈ ಸಂಬಂಧ ಎರಡು ಪ್ರಕರಣಗಳ ದೂರು ಪಡೆದ ಪೊಲೀಸರು ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದಾಗ ನಾಲ್ವರು ಬುರ್ಖಾಧಾರಿ ಮಹಿಳೆಯರು ಮೇಲೆ ಅನುಮಾನ ಮೂಡಿತ್ತು. ನಂತರ ಇದೇ ಗೌರಿಬಿನದೂರು ಬಸ್ ನಿಲ್ದಾಣದಲ್ಲಿ ಕಳೆದ 3 ದಿನಗಳ ಹಿಂದೆ ಮತ್ತೆ ಅದೇ ನಾಲ್ವರು ಬಂದು ಮರಳಿ ಕಳ್ಳತನಕ್ಕೆ ಯತ್ನಿಸಲು ಹೊಂಚು ಹಾಕುತ್ತಿದ್ದಾಗ ರೆಡ್ ಹ್ಯಾಂಡಾಗಿ ಪೊಲೀಸರು ಮಹಿಳೆಯರನ್ನ ಬಂಧಿಸಿದ್ದಾರೆ.
ಇನ್ನೂ ಸಿಸಿಟಿವಿ ಪರಿಶೀಲನೆ ವೇಳೆ ಮಹಿಳೆ ಬುರ್ಖಾ ಮೇಲೆ ಹಾಕಿದ್ದ ವೇಲ್ ಗಮನಿಸಿದ್ದ ಪೊಲೀಸರು ಮತ್ತೆ ಅದೇ ವೇಲ್ ಧರಿಸಿ ಮಹಿಳೆ ಇರೋದನ್ನ ಕಂಡು ಅನುಮಾನಗೊಂಡು ಮಹಿಳೆಯರನ್ನ ಬಂಧಿಸಿದ್ರು. ಈ ವೇಳೆ ಬಂಧಿತರು ಸತ್ಯ ಬಾಯ್ಬಿಟ್ಟಿದ್ದಾರೆ.
ಇನ್ನೂ ಇವರದ್ದು ಇದೇ ಪ್ರವೃತ್ತಿಯಾಗಿದ್ದು, ರಾಜ್ಯದ ನಾನಾ ಕಡೆ ಹತ್ತು ಹಲವು ಕಳವು ಪ್ರಕರಣಗಳನ್ನ ಮಾಡಿದ್ದಾರೆ. ಇನ್ನೂ ಬಂಧಿತರಿಂದ ಕಳವು ಮಾಡಿದ್ದ ಚಿನ್ನ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ.