ದೊಡ್ಡಬಳ್ಳಾಪುರ, (Doddaballapura): ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವರಪ್ರದ ಬೇಟೆ ರಂಗನಾಥಸ್ವಾಮಿ ಕೋಲು ಬೇಟೆ ಜಾತ್ರ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಹುಲಿಕುಂಟೆ ಗ್ರಾಮದ ಬೇಟೆ ಕೊಡುವ ಕದಿರು ಆಲದ ಮರದ ದಿನ್ನೆಯವರೆಗೆ ಸಾಗಿದ ರಂಗನಾಥಸ್ವಾಮಿ ಉತ್ಸವದಲ್ಲಿ ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು. ಪೇಟಧಾರಿ ಬೇಟೆ ರಂಗನಾಥಸ್ವಾಮಿಯನ್ನು ಹೂವುಗಳಿಂದ ಸಿಂಗರಿಸಲಾಗಿತ್ತು.
ಹುಲಿಕುಂಟೆ,ಮಾವಿನಕುಂಟೆ,ಸೀತಕಲ್ಲು,ಚಿಕ್ಕಬೆಳವಂಗಲ ಮತ್ತಿತರೆ ಗ್ರಾಮಗಳಿಂದ ಕೋಲು, ಕುಡುಗೋಲು, ಭರ್ಜಿಗಳನ್ನು ಹಿಡಿದುಕೊಂಡು ತಂಡೋಪ ತಂಡವಾಗಿ ಆಗಮಿಸಿ ಕೋಲು ಬೇಟೆ ಸಂಪ್ರದಾಯವನ್ನು ಸಾಂಕೇತಿಕವಾಗಿ ಆಚರಿಸಿದರು.
ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಯಲ್ಲಿ ಕೋಲುಬೇಟೆ, ವಿವಿಧ ರೀತಿಯ ತಿಂಡಿ ತಿನಿಸುಗಳ ಅಂಗಡಿಗಳು ಗಮನ ಸೆಳೆದವು.
ಸುಮಾರು 600 ವರ್ಷಗಳ ಇತಿಹಾಸವಿರುವ ಚೋಳರ ಕಾಲದ ಇತಿಹಾಸ ಹೊಂದಿರುವ ಹುಲಿಕುಂಟೆ ಕೋಲುಬೇಟೆ ಕಾರಣಕ್ಕೆ ಮಹತ್ವದ್ದೆನಿಸಿದೆ.
ಮಾಗಡಿ ತಾಲ್ಲೂಕಿನ ಜನತೆಯ ಆರಾದ್ಯ ದೈವವಾದ ಮಾಗಡಿ ರಂಗನಾಥ, ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದ ಸುತ್ತಲಿನ ಜನರು ಪೂಜಿಸುವ ಹಣಬೆ ರಂಗನಾಥ ಮತ್ತು ಹುಲಿಕುಂಟೆ ಸುತ್ತಲಿನ ಜನತೆಯ ಆರಾದ್ಯ ದೈವ ಹುಲಿಕುಂಟೆ ಬೇಟೆ ರಂಗನಾಥ ಈ ಮೂರು ಐತಿಹಾಸಿಕ ವ್ಯಕ್ತಿಗಳ ಶಕ್ತಿ ಸಂಚಯನದ ಸಾಕಾರ ರೂಪವೇ ಹುಲಿಕುಂಟೆ ಬೇಟೆ ರಂಗನಾಥ.
ಮೂರೂ ಜನ ವ್ಯಕ್ತಿಗಳು ಸೇರಿ ತಮ್ಮ ಶಕ್ತಿಯನ್ನು ಕ್ರೋಢೀಕರಿಸಿ ಹುಲಿಕುಂಟೆಯಲ್ಲಿ ‘ಬೇಟೆ ರಂಗನಾಥಸ್ವಾಮಿ’ ಹೆಸರಿನ ಗುಡಿಯೊಂದನ್ನು ಕಟ್ಟಿ ವಿಗ್ರಹವೊಂದನ್ನು ಸ್ಥಾಪಿಸಿ ಯುದ್ಧವೊಂದಕ್ಕೆ ಸಿದ್ಧರಾಗುತ್ತಾರೆ.
ರಂಗನಾಥಸ್ವಾಮಿಯೇ ಬೇಟೆಯ ನಾಯಕ ಎಂದು ಈ ಆಚರಣೆಯನ್ನು ಸಾಂಕೇತಿಕವಾಗಿ ಈಗಲೂ ನಡೆಸುತ್ತ ಬರಲಾಗುತ್ತಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ರಂಗನಾಥಸ್ವಾಮಿಗೆ ಮೊದಲ ಬಲಿ ಸಿಗುತ್ತದೆ. ಆ ಮೊದಲ ಬಲಿ ಸಿಕ್ಕ ಜಾಗದಲ್ಲಿ ಒಂದು ಮಂಟಪ ಕಟ್ಟಿ ಸ್ವಾಮಿಯನ್ನು ಶಾಂತಗೊಳಿಸಲಾಗುತ್ತದೆ.
ಈಗಲೂ ಅದೇ ಜಾಗದಲ್ಲಿ ಬೇಟೆ ಮುಗಿಸಿಕೊಂಡು ಬಂದ ಬೇಟೆ ರಂಗನಾಥಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಕುರಿತ ಆಚರಣೆಗೆ ‘ಕೋಲು ಬೇಟೆ’ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷದ ಶೂನ್ಯ ಮಾಸದ ಕಡೆಯ ಗುರುವಾರ ಈ ಆಚರಣೆ ನಡೆಯುತ್ತದೆ.
ಬೆಳೆಗಳ ಕೊಯ್ಲು ಮುಗಿದು ದಾನ್ಯ ಮನೆಗೆ ಬರುವ ಕಾಲವಾದ್ದರಿಂದ ದಾನ್ಯಗಳನ್ನು ಹೊಲಗಳಲ್ಲಿಯೇ ಕೂಡಿಡುವ ಪರಿಪಾಟವಿದ್ದುದರಿಂದ ಸುತ್ತಲಿನ ಪ್ರದೇಶದ ಪ್ರಾಣಿಗಳನ್ನು ನಿಯಂತ್ರಿಸುವ ಕಾರಣಕ್ಕೆ ಸುತ್ತಲಿನ ಜನ ಬೇಟೆಯಾಡಿ ಪ್ರಾಣಿಗಳನ್ನು ನಿಯಂತ್ರಿಸುವ ಪದ್ಧತಿ ಬೆಳೆದು ಬಂದಿರಬಹುದು ಎನ್ನಲಾಗಿದೆ.
ಹಳ್ಳಿಗಳ ಜನ ಸುತ್ತಲಿನ ಕಾಡುಗಳನ್ನು ತಿರುಗಿ,ಕೋಲು ಹಿಡಿದುಕೊಂಡು ಈ ಸ್ಥಳಕ್ಕೆ ಬಂದು ಸೇರಿ ಸಾಂಪ್ರದಾಯಿಕ ಕೋಲು ಬೇಟೆ ಆಚರಣೆಯನ್ನು ಮಾಡಲಾಗುತ್ತದೆ.