ದೊಡ್ಡಬಳ್ಳಾಪುರ (Doddaballapura): ಕಂದಾಯ ಇಲಾಖೆ ನಿವೃತ್ತ ನೌಕರನೋರ್ವ ಲೇಔಟ್ ನಿರ್ಮಿಸುವ ಸಲುವಾಗಿ ಸರ್ಕಾರಿ ಜಮೀನು ಕಬಳಿಸಲು ಮುಂದಾಗಿದ್ದಾರೆಂದು ಆರೋಪಿ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಅರ್ಕಾವತಿ ದೇವಾಲಯದ ಬಳಿ ನಡೆದಿದೆ.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ದೇವಾಲಯದ ಜಮೀನಿಗೆ ಹೊಂದಿ ಕೊಂಡಂತಿರುವ ಈ ಜಮೀನು ಸರ್ಕಾರಿ ಬಂಡೆ ಖರಾಬು ಜಮೀನಾಗಿದೆ. ಆದರೆ ಈ ಜಾಗದಲ್ಲಿದ್ದ ಬಂಡೇ ರಾತ್ರೋ ರಾತ್ರಿ ಕಾಣೆಯಾಗಿದ್ದು, ಇಲ್ಲಿದ್ದ ಮರಗಳನ್ನು ಕಡಿದು, ರಾಜ ಕಾಲುವೆಯನ್ನು ಮುಚ್ಚಲಾಗಿದೆ.
ಈ ಜಮೀನು ಹೆದ್ದಾರಿಗೆ ಕಾಣುತ್ತಿದ್ದು, ಎಲ್ಲಾ ಅಧಿಕಾರಿಗಳು ಅದರ ಮೇಲೆಯೇ ಓಡಾಡುತ್ತಾರೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಣ್ಣು ಕಾಣಿಸ್ತಾ ಇಲ್ಲ. ಯಾರಾದ್ರೂ ಅಮಾಯಕರು 10 ಅಡಿ, 5 ಅಡಿ ತಿಳಿಯದೆ ಮನೆ ಕಟ್ಟಿದ್ದರೆ, ಅಲ್ಲಿಗೆ ಬಂದು ದರ್ಪ ತೋರಿಸಲು ಮಾತ್ರ ಸೀಮಿತವಾಗಿದ್ದಾರೆ. ಕೂಡಲೇ ತಾಲೂಕು ಆಡಳಿತ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಜಮೀನು ಹಾಗೂ ಇಲ್ಲಿರುವ ವಾಹನಗಳನ್ನು ವಶಕ್ಕೆ ಪಡೆದು, ರಕ್ಷಿಸಬೇಕೆಂದು ಒತ್ತಾಯಿಸಿದರು.
ಅಲ್ಲದೆ ದೊಡ್ಡಬಳ್ಳಾಪುರ ತಾಲೂಕಿನ ಅಕ್ರಮ ಲೇಔಟ್ಗಳು ಇದೇ ರೀತಿ ನಡೆಯುತ್ತಿವೆ ಎಂದು ಆರೋಪಿಸಿದ ರಾಜಘಟ್ಟರವಿ, ಬಫರ್ ಜೋನ್‌ಗಳನ್ನು ತಿಂದುಹಾಕುತ್ತಿರುವ ಭೂಗಳ್ಳರು, ಕೆರೆಗಳಲ್ಲಿ ಲೇಔಟ್ ಮಾಡ್ತಾ ಇದ್ದಾರೆ.
ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಪ್ರಶ್ನಿಸಿದರೆ ಸಬೂಬು ಹೇಳುತ್ತಾರೆ. ಆದರೆ ನಮ್ಮ ಗಮನಕ್ಕೆ ಬಂದ ಈ ರೀತಿಯ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳದ ಹೊರತು ನಾವು ಸುಮ್ಮನೆ ಕೂರುವುದಿಲ್ಲ ಎಂದರು.
ಈ ವೇಳೆ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಮುಖಂಡರಾದ ಶ್ರೀನಗರ ಮನು, ಫಯಾಸ್, ಜೋಗಳ್ಳಿ ವಹೀದ್, ಮೋಹನ್, ರಮೇಶ್, ಸ್ಥಳೀಯರಾದ ಹಮಾಮ್ ಚಂದ್ರು, ಹರೀಶ್, ಅನಿಲ್ ಮತ್ತಿತರರಿದ್ದರು.