Site icon ಹರಿತಲೇಖನಿ

Daily story; ಹರಿತಲೇಖನಿ ದಿನಕ್ಕೊಂದು ಕಥೆ: ಕರ್ಣ ಹೇಗೆ ದಾನಶೂರ..

Daily story: ಸೂತಪುತ್ರನಾದ ಕರ್ಣ ದಾನಶೂರ ಹೇಗೆ ಆಗುತ್ತಾನೆ. ದಾನ ಮಾಡಲು ಅವನ ಬಳಿ ಸಂಪತ್ತಾದರೂ ಎಷ್ಟಿದೆ. ದುರ್ಯೋಧನನ ಕರುಣೆಯಿಂದ ಅಂಗರಾಜ್ಯಾಧಿಪತಿಯಾಗಿದ್ದಾನೆ.

ನಾವು ರಾಜರು ಯಜ್ಞ, ದಾನ-ಧರ್ಮ ಮಾಡುವವರು. ರಾಜ್ಯದ ಜನರನ್ನು ರಕ್ಷಿಸುವವರು, ಕಾಲಕಾಲಕ್ಕೆ ಜನರ ಕಷ್ಟಕ್ಕೆ ಆಗುವವರು. ನಮಗಿಂತ ಕರ್ಣನು ಹೆಚ್ಚಾಗಿ ಮಾಡಲು ಸಾಧ್ಯವೇ. ಮತ್ತೇಕೆ ದಾನಶೂರನೆಂಬ ಬಿರುದು ಎಂದು ಅರ್ಜುನ ಅಹಂನಲ್ಲಿ ಮಾತನಾಡಿದ್ದ.

ಸರ್ವವನ್ನು ಬಲ್ಲ ಶ್ರೀಕೃಷ್ಣ ಮುಗುಳ್ನಗುತ್ತಾ ಅರ್ಜುನ, ವೈರಿಯಾದರೂ ಆತನಲ್ಲಿರುವ ಒಳ್ಳೆಯ ಗುಣವನ್ನು ಮೆಚ್ಚಿಕೊಳ್ಳುವುದು ಧರ್ಮ ಎಂದಿದ್ದ.

ಕೃಷ್ಣನ ಮಾತಿನಿಂದ ಅರ್ಜುನನ ಅಹಃ ಇಳಿಯಲಿಲ್ಲ. ಅದನ್ನು ಕಂಡ ಕೃಷ್ಣ ಗೆಳೆಯನಿಗೆ ಉದಾಹರಣೆ ಮೂಲಕ ಕರ್ಣನ ದಾನದ ಗುಣವನ್ನು ಮನದಟ್ಟು ಮಾಡಲು ಮುಂದಾಗುತ್ತಾನೆ.

ದ್ವಾರಕೆಗೆ ಬಂದಿದ್ದ ಕರ್ಣನನ್ನು ಕರೆದು 100 ಕೆಜಿಯಷ್ಟು ಚಿನ್ನವನ್ನು ಕೊಟ್ಟು ನೀನು ಇದನ್ನು ಇಟ್ಟುಕೊಳ್ಳಬಾರದು, ದಾನ ಮಾಡಬೇಕು ಎಂದು ಸೂಚಿಸುತ್ತಾನೆ. ಒಪ್ಪಿದ ಕರ್ಣ ಚಿನ್ನವನ್ನು ತೆಗೆದುಕೊಂಡು ಹೋಗುತ್ತಾನೆ.

ಅರ್ಜುನನಿಗೂ 100 ಕೆಜಿ ಚಿನ್ನ ಕೊಟ್ಟು ದಾನ ಮಾಡುವಂತೆ ಹೇಳುತ್ತಾನೆ. ತಲೆಯಾಡಿಸಿದ ಅರ್ಜುನ ಚಿನ್ನವನ್ನು ಪಡೆದು ಹಸ್ತಿನಾಪುರಕ್ಕೆ ಮರಳುತ್ತಾನೆ.

ಕೆಲ ದಿನಗಳ ಬಳಿಕ ಕೃಷ್ಣ ಹಸ್ತಿನಾಪುರಕ್ಕೆ ಬಂದಾಗ ಅರ್ಜುನ ತಾನು 100 ಕೆಜಿ ದಾನ ಮಾಡಿದ್ದಾಗಿ ತಿಳಿಸುತ್ತಾನೆ. ಹೌದೇ ಹೇಗೆ ದಾನ ಮಾಡಿದೆ ಎಂದು ಕೃಷ್ಣ ಕೇಳುತ್ತಾನೆ. 100 ಕೆಜಿ ಚಿನ್ನವನ್ನು ತಂದು ಒಂದೊಳ್ಳೆ ದಿನ ನಾಡಿನ ಜನಕ್ಕೆ ತಿಳಿಸಿ, ಸಮಾರಂಭ ಮಾಡಿ, ಇಲ್ಲದವರಿಗೆ ಸಮಾನಾಗಿ ಚಿನ್ನವನ್ನು ದಾನ ಮಾಡಿದೆ ಎಂದು ವಿವರಿಸುತ್ತಾನೆ.

ಅರ್ಜುನ ಮಾತು ಕೇಳಿ ನಕ್ಕ ಕೃಷ್ಣ.. ಕರ್ಣನೂ ದಾನ ಮಾಡಿದ್ದಾನೆ, ನೀನು ದಾನ ಮಾಡಿದ್ದೀಯ. ಆದರೆ ಕರ್ಣನ ದಾನವೇ ಶ್ರೇಷ್ಠ ಎಂದು ಬಿಡುತ್ತಾನೆ. ಕೃಷ್ಣನ ಮಾತಿನಿಂದ ಕುಪಿತಗೊಂಡ ಅರ್ಜುನ ಇಬ್ಬರೂ ದಾನ ಮಾಡಿದರೂ ಕರ್ಣನ ದಾನ ಮಾತ್ರ ಹೇಗೆ ಶ್ರೇಷ್ಠ ಎಂದು ಜಗಳಕ್ಕೆ ಬಿದ್ದವನಂತೆ ಪ್ರಶ್ನಿಸುತ್ತಾನೆ.

ಕರ್ಣನ ದಾನದ ವಿಧ ಕೇಳಿದರೆ ನೀನು ಒಪ್ಪುತ್ತೀಯ ಅರ್ಜುನ ಎನ್ನುವ ಕೃಷ್ಣ ವಿವರಿಸುತ್ತಾ ಹೋಗುತ್ತಾನೆ. ನಾನು ಕೊಟ್ಟ 100 ಕೆಜಿ ಚಿನ್ನವನ್ನು ಕರ್ಣ ದ್ವಾರಕೆಯಿಂದ ಹಸ್ತಿನಾಪುರಕ್ಕೆ ತರಲೇ ಇಲ್ಲ. ಬರುತ್ತಾ ದಾರಿಯಲ್ಲೇ ಎಲ್ಲವನ್ನು ದಾನ ಮಾಡಿಬಿಟ್ಟಿದ್ದ.

ಇಂತವರಿಗೆ ಕೊಡಬೇಕು, ತನ್ನ ರಾಜ್ಯದವರಿಗೆ ಕೊಡಬೇಕು, ಕೊಡುವುದನ್ನು ಯಾರೋ ನೋಡಬೇಕು, ಕೊಟ್ಟವನು ನನಗೆ ಪುನಂ ಸಹಾಯ ಮಾಡಬೇಕು, ಸಮಾನವಾಗಿ ಕೊಡಬೇಕು ಎಂಬ ಚೌಕಟ್ಟನ್ನು ಮೀರಿದ ದಾನ ಕರ್ಣನದ್ದು. ನಿನ್ನಂತೆ ತನ್ನ ರಾಜ್ಯದವರಿಗೆ ಮಾತ್ರ ಕೊಡಬೇಕು ಎಂದು ಕರ್ಣ ಬುದ್ಧಿ ಉಪಯೋಗಿಸಿ ದಾನ ಮಾಡಿಲ್ಲ. ಕೊಡುವುದಷ್ಟೇ ಅವನ ಧರ್ಮ. ಇದ್ದು ಪಡೆದರೆ ಅದು ಪಡೆದವನ ಕರ್ಮವಾಗುತ್ತೆ.

ದಾನಕ್ಕೆ ಅರ್ಥ ಬರುವುದೇ ಅದು ನಿಸ್ವಾರ್ಥವಾಗಿದ್ದಾಗ. ಕರ್ಣನಿಗೆ ದಾನ ಎಂಬುವುದು ಉಸಿರಾಟದಷ್ಟೇ ಸಹಜ. ಹೀಗಾಗಿ ಅವನನ್ನು ದಾನಶೂರ ಎನ್ನುತ್ತಾರೆ ಎಂದು ಕೃಷ್ಣ ಹೇಳುತ್ತಲೆ ಅರ್ಜುನ ಅಹಂ ಧುತ್​ ಎಂದು ಇಳಿದಿತ್ತು.

ಕೃಪೆ: ಮಹಾಭಾರತ ಕಥೆಗಳು.

Exit mobile version