ಕೋಟಾ: ವಿಧಿ ಬರಹ ಎಂತ ಘೋರ ಎಂಬಂತೆ ಪತ್ನಿಯ ಅನಾರೋಗ್ಯದ ಕಾರಣ ಆಕೆಯ ಆರೈಕೆ ಮಾಡಲೆಂದು ತನ್ನ ಸರ್ಕಾರಿ ನೌಕರಿಯನ್ನೇ ತ್ಯಜಿಸಿದ ಪತಿಯ ಬಾಳಲ್ಲಿ ವಿಧಿ ಆಟವಾಡಿರುವ ಘಟನೆ (Shocking) ರಾಜಾಸ್ಥಾನದಲ್ಲಿ ನಡೆದಿದೆ.
ಸರ್ಕಾರಿ ನೌಕರನ ಬೀಳ್ಕೊಡುಗೆ ಸಮಾರಂಭವು ದುರಂತವಾಗಿ ಮಾರ್ಪಟ್ಟಿದ್ದುಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗಾಗಿ ನಿವೃತ್ತಿ ಹೊಂದಲು ನಿರ್ಧರಿಸಿದ್ದ ಪತಿಯ ಕಣ್ಣೆದುರೇ ಪತ್ನಿ ಸಾವನ್ನಪ್ಪಿದ್ದಾಳೆ.
ರಾಜಸ್ಥಾನದ ಕೋಟಾದಲ್ಲಿ ಘಟನೆ ನಡೆದಿದ್ದು ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪತಿ ದೇವೇಂದ್ರ ಸ್ಯಾಂಡಲ್ ಅವರು ಹೃದ್ರೋಗಿಯಾಗಿದ್ದ ಪತ್ನಿ ಟೀನಾ ಅವರನ್ನು ನೋಡಿಕೊಳ್ಳಲು ಮೂರು ವರ್ಷಗಳ ಮೊದಲೇ ನಿವೃತ್ತಿ ಪಡೆಯಲು ನಿರ್ಧರಿಸಿದ್ದರು.
ನಿವೃತ್ತಿಯ ದಿನ ಬೀಳ್ಕೊಡುಗೆ ಸಮಾರಂಭದಲ್ಲಿ ಸ್ನೇಹಿತರು ಸನ್ಮಾನಿಸುತ್ತಿರುವಾಗ ಟೀನಾ ತನ್ನ ಪತಿಗೆ ‘ನನಗೆ ತಲೆತಿರುಗುತ್ತಿದೆ ಎಂದು ಹೇಳುತ್ತಾ, ಕುರ್ಚಿಯ ಮೇಲೆ ಕೂರುತ್ತಾರೆ. ಪತಿ ಮತ್ತು ಸುತ್ತಮುತ್ತಲೂ ಇದ್ದ ಜನರು ದಯವಿಟ್ಟು ಸ್ವಲ್ಪ ನೀರು ಕೊಡಿ ಎಂದು ಹೇಳಿ, ಆಕೆಯನ್ನು ಉಪಚರಿಸುತ್ತಾರೆ.
ಇನ್ನು ನೋಡ ನೋಡ್ತಿದ್ದಂತೆ ಟೀನಾ ಟೇಬಲ್ ಮೇಲೆ ಕುಸಿದುಬಿದ್ದಿದ್ದು ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಪತ್ನಿ ಟೀನಾ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಆಕೆಯ ಆರೋಗ್ಯವನ್ನು ನೋಡಿಕೊಳ್ಳಲೆಂದೇ ಪತಿ ಅವಧಿಗೂ ಮೊದಲೇ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅವರ ನಿವೃತ್ತಿ ದಿನವೇ ಪತ್ನಿ ಮೃತಪಟ್ಟಿದ್ದಾರೆ.