ಶಿವಮೊಗ್ಗ: ಮೊಬೈಲ್ ನೋಡಬೇಡ ಎಂದು ಹೇಳಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾರನಹಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಧನಶ್ರೀ ಎಂದು ಗುರುತಿಸಲಾಗಿದೆ.
ಸೋಮವಾರ ಶಾಲೆಯಿಂದ ವಾಪಸ್ ಬಂದ ಬಾಲಕಿ ಸೀದಾ ಮೊಬೈಲ್ ಉಪಯೋಗಿಸಿದ್ದಾಳೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾಯಿ ಹೋಗಿ ಓದು ಎಂದು ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೊಬೈಲ್ ನೋಡಬೇಡ ಎಂದು ಹೇಳಿದ್ದಕ್ಕೆ ನೇರವಾಗಿ ರೂಮ್ ಗೆ ಹೋಗಿ ಸಿಟ್ಟಿನಲ್ಲಿ ಕಳೆನಾಶಕವನ್ನು ಕುಡಿದಿದ್ದಾಳೆ. ಈ ವೇಳೆ ತಾಯಿ ಎಷ್ಟು ಕರೆದರೂ ಬಾರದ ಹಿನ್ನಲೆ ರೂಮಿಗೆ ಬಂದು ನೋಡಿದಾಗ ಧನಶ್ರೀ ಮೂರ್ಛೆ ಹೋಗಿದ್ದಳು.
ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾಳೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.