Christmas 2024: ಇಂದು ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಎಲ್ಲೆಲ್ಲೂ ಕ್ರಿಸ್‌ಮಸ್‌ನ ಸಂಭ್ರಮ ಜೋರಾಗಿದೆ. ಪ್ರತಿವರ್ಷ ಪ್ರಪಂಚದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕ್ರಿಸ್‌ಮಸ್ ಎಂದರೆ ಎಲ್ಲರೂ ಒಟ್ಟಾಗಿ ಸಂತೋಷ, ಖುಷಿಯ ಕ್ಷಣಗಳನ್ನು ಕಳೆಯುವುದು. ಕ್ರಿಸ್‌ಮಸ್ ಹಳೆಯ ವರ್ಷಕ್ಕೆ ಅಂತ್ಯ ಹಾಡಿ, ಹೊಸ ವರ್ಷವನ್ನು ಸ್ವಾಗತಿಸುವ ಸಮಯವೂ ಹೌದು.
ಡಿ.24 ರಂದು ರಾತ್ರಿ ಮಧ್ಯರಾತ್ರಿಯಿಂದಲೇ ಜಿಲ್ಲೆಯಾದ್ಯಂತ ಎಲ್ಲ ಚರ್ಚ್ಗಳಲ್ಲಿ ಪವಿತ್ರ ದಿವ್ಯ ಬಲಿಪೂಜೆ, ಪ್ರಾರ್ಥನೆ ನಡೆಯಿತು. ವಿವಿಧ ಚರ್ಚ್ಗಳ ಉಸ್ತುವಾರಿ ಹೊಂದಿರುವ ಆಯಾ ಪ್ರದೇಶಗಳ ಬಿಷಪ್ಗಳು ಹಾಗೂ ಧರ್ಮಗುರುಗಳ ನೇತೃತ್ವದಲ್ಲಿ ಕ್ರಿಸ್ಮಸ್ ವಿಶೇಷ ಪೂಜೆಗಳು ನೆರವೇರಿದವು.
ಏಸುಕ್ರಿಸ್ತ ಹುಟ್ಟಿದ ದಿನವೇ ಕ್ರಿಸ್ಮಸ್ ಹಬ್ಬ. ಈ ದಿನವನ್ನು ಕ್ರಿಸ್ತ ಜಯಂತಿ ಎಂದೂ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಪ್ರತಿ ವರ್ಷ ಡಿಸೆಂಬರ್ 25 ರಂದು ಈ ಹಬ್ಬ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ಬೈಬಲ್ನ ಪ್ರಕಾರ ಯೇಸುಕ್ರಿಸ್ತ, ಮೇರಿ ಹಾಗೂ ಜೋಸೆಫರ ಮಗನಾಗಿ ಜೆರುಸಲೇಮ್ ಪಟ್ಟಣದ ಬೆತ್ಲಹೆಮ್ ಎಂಬ ಊರಿನಲ್ಲಿ ಜನಿಸಿದರು. ರೋಮನ್ ಜನಗಣತಿಯ ಪ್ರಕಾರ ಮೇರಿ ಹಾಗೂ ಜೋಸೆಫ್ ದಂಪತಿ ತಮ್ಮ ಹೆಸರನ್ನು ನೋಂದಾಯಿಸಲು ಹೋಗುತ್ತಿದ್ದ ವೇಳೆ ಮೇರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ ಇದ್ದ ಗೋದಲಿಯೊಂದರಲ್ಲಿ ಆಶ್ರಯ ಪಡೆದು, ಯೇಸುಕ್ರಿಸ್ತನಿಗೆ ಜನ್ಮ ನೀಡಿದ್ದರು.
ಯಹೂದ್ಯ ಧರ್ಮದ ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್‌ನ ವಂಶದಲ್ಲಿ ಮಿಸಿಹಾ ಅಥವಾ ಮೆಸ್ಸಾಯ ಎನ್ನುವ ಅರ್ಥದ ದೇವರ ದೂತ, ರಕ್ಷಕ ಬರುವನೆಂಬ ನಂಬಿಕೆಯಿತ್ತು. ಈ ದೇವರ ದೂತನೇ ಯೇಸುಕ್ರಿಸ್ತ ಎಂದು ಕ್ರೈಸ್ತರು ಭಾವಿಸುತ್ತಾರೆ.
ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲ ಅಕ್ಷರವು ಇಂಗ್ಲಿಷಿನ ಎಕ್ಸ್ನಂತೆ ತೋರುವುದರಿಂದ ಕೆಲವರು ಎಕ್ಸ್ಮಸ್ ಎಂದು ಬರೆಯುತ್ತಿದ್ದರು. ಅದು ಮುಂದುವರೆದು ಕ್ರಿಸ್ಮಸ್ ಆಗಿದೆ ಎನ್ನಲಾಗಿದೆ.
ಕ್ರಿಸ್ಮಸ್ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆಯಾಗಿದೆ. ಕ್ರಿಸ್ಮಸ್ ವೃಕ್ಷಕ್ಕೆ ದೀಪಗಳು ಹಾಗೂ ಇತರ ವಸ್ತುಗಳಿಂದ ಅಲಂಕಾರ ಮಾಡಲಾಗುತ್ತದೆ.
ಅನೇಕ ಕಡೆಗಳಲ್ಲಿ ಮನೆಯ ಹೊರಗಡೆ ಕ್ರಿಸ್ತನ ಜನನ ಸಮಯದಲ್ಲಿ ಗೊಲ್ಲರಿಗೆ ಮಾರ್ಗದರ್ಶಿಯಾಗಿ ಗೋಚರಿಸಿದ ನಕ್ಷತ್ರದ ಆಕೃತಿಗಳನ್ನು, ನಕ್ಷತ್ರ ದೀಪಗಳನ್ನು ಕಟ್ಟುವುದು ಪಾರಂಪರಿಕೆಯಾಗಿ ಮುಂದುವರಿದುಕೊಂಡು ಬಂದಿದೆ. ಅದಷ್ಟೇ ಅಲ್ಲದೆ ಕ್ರಿಸ್ಮಸ್ ಹಬ್ಬಕ್ಕೆ ಚರ್ಚ್ಗಳು ಹಾಗೂ ಮನೆಗಳ ಮುಂದೆ ಗೋದಲಿಗಳ ನಿರ್ಮಾಣ ಮಾಡಲಾಗುತ್ತದೆ.
ಹಬ್ಬಕ್ಕೆ ಇನ್ನೇನು ಒಂದು ತಿಂಗಳ ಇರುವಾಗಲೇ ಇದರ ತಯಾರಿ ಪ್ರಾರಂಭವಾಗುತ್ತದೆ. ಇದರ ಜೊತೆಗೆ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ ತಿಂಗಳ ಆರಂಭದಿಂದಲೇ ವೃತಾಚರಣೆ ಆರಂಭವಾಗುತ್ತದೆ.
ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಮನೆ ಮನೆಗೆ ತೆರಳಿ ಕ್ರಿಸ್ಮಸ್ ಸಂದೇಶ ಸಾರುವ ಕ್ಯಾರಲ್ ಹಾಡುಗಳನ್ನು ಹಾಡಲಾಗುತ್ತದೆ.