ದೊಡ್ಡಬಳ್ಳಾಪುರ: ಯೇಸು ಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್ (Christmas) ಹಬ್ಬವನ್ನು ತಾಲೂಕಿನ ವಿವಿದೆಡೆಗಳಲ್ಲಿ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ಆಚರಿಸಲಾಯಿತು.
ಮಂಗಳವಾರ ತಡರಾತ್ರಿಯಿಂದಲೇ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ಕ್ರೈಸ್ತ ಬಾಂಧವರು ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಟಿ.ಬಿ.ವೃತ್ತದ ಬಳಿಯಿರುವ ಸಂತ ಪೇತ್ರರ ಚರ್ಚ್‌ನಲ್ಲಿ ಈವ್ ಅಂಗವಾಗಿ ಮಂಗಳವಾರ ರಾತ್ರಿ ಕ್ಯಾರೋಲ್ ಹಾಡುಗಳು ಆಡಂಬರದ ಬಲಿಪೂಜೆ, ವಿಶೇಷ ಪ್ರಾರ್ಥನೆ ನಡೆಯಿತು.
ಚರ್ಚ್‌ಗಳಲ್ಲಿ ಜಗತ್ತಿಗೆ ಬೆಳಕು ನೀಡುವ ಜೀಸಸ್ ಕ್ರಿಸ್ತನಿಗೆ ಸಾಂಕೇತಿಕವಾಗಿ ಮೇಣದ ಬತ್ತಿಗಳನ್ನು ಹಚ್ಚಲಾಗುತ್ತದೆ. ಹಾಗೂ ಕೆಲವರು ತಮ್ಮ ಹರಕೆಗಳನ್ನು ಪೂರ್ಣಗೊಳಿಸಲು ಸಹ ಮೇಣದ ಬತ್ತಿಗಳನ್ನು ಹಚ್ಚುವ ದೃಶ್ಯ ಸಾಮಾನ್ಯವಾಗಿತ್ತು.
ಸಂತ ಪೇತ್ರರ ಚರ್ಚ್,ಸುಮಿತ್ರಾ ಸ್ಮಾರಕ ದೇವಾಲಯ, ಸೈಂಟ್ ಪಾಲ್ ದೇವಾಲಯದಲ್ಲಿ ಯೇಸು ಕ್ರಿಸ್ತನ ಜನನ ವೃತ್ತಾಂತ ತಿಳಿಸುವ ಬೊಂಬೆಗಳು ಹಾಗೂ ವಸ್ತು ಪ್ರದರ್ಶನ ಗಮನ ಸೆಳೆಯಿತು.
ಸಂತ ಪೇತ್ರರ ಚರ್ಚ್‌ನಲ್ಲಿ ಫಾದರ್ ಆಂಟೋನಿ ಡಿಸೋಜಾ ಪ್ರವಚನ ನೀಡಿದರು.
ನಗರದ ಮಾರುಕಟ್ಟೆ ಚೌಕ ಸಮೀಪದ ಸುಮಿತ್ರಾ ಸ್ಮಾರಕ ದೇವಾಲಯದಲ್ಲಿ ರೆವರೆಂಡ್ ಸಂಜಯ್ ಪ್ರವಚನ ನೀಡಿ ಯೇಸು ವೃತ್ತಾಂತವನ್ನು ತಿಳಿಸಿದರು.
ತಾಲೂಕಿನ ಪಾಲನಜೋಗಿಹಳ್ಳಿಯ ಸೈಂಟ್ ಪಾಲ್ ದೇವಾಲಯ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿರುವ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಆಚರಣೆ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನಡೆದವು.