ದೊಡ್ಡಬಳ್ಳಾಪುರ: ರಾತ್ರಿಯಷ್ಟೇ ಕ್ರೂಸರ್ ಮೊಗಚಿ ಬಿದ್ದು ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿರುವ ಬೆನ್ನಲ್ಲೇ, ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ (Accident) ಸಂಭವಿಸಿ ಓರ್ವ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ರಘುನಾಥಪುರದ ಬಳಿ ಸಂಭವಿಸಿದೆ.
ಮೃತ ಯುವಕನನ್ನು 19 ವರ್ಷದ ಮನೋಜ್ ಎಂದು ಗುರುತಿಸಲಾಗಿದೆ.
ಮೃತ ಯುವಕ ನಾಗದೇನಹಳ್ಳಿ ಬಳಿಯಿರುವ ಗೀತಂ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಕ್ರಿಸ್ ಮಸ್ ರಜೆ ಹಿನ್ನೆಲೆ ಗೆಳೆಯ ಸಾಯಿ ರೋಹಿತ್ ಅವರೊಂದಿಗೆ ದೊಡ್ಡಬಳ್ಳಾಪುರಕ್ಕೆ ಬರುತಿದ್ದ ವೇಳೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮನೋಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದರೆ, ಸಾಯಿ ರೋಹಿತ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ವಿದ್ಯಾರ್ಥಿ ಶವವನ್ನು ದೊಡ್ಡಬಳ್ಳಾಪುರ ಶವಾಗಾರದಲ್ಲಿ ಇಡಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
