ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು ಒತ್ತು ನೀಡಲು ನಿರ್ಧರಿಸಿದ್ದು, ಆನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep eshwar) ಹೇಳಿದರು.
ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗುಯ್ಯಲಹಳ್ಳಿಯಲ್ಲಿ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಜನತೆಯ ಅಹವಾಲು ಸ್ವೀಕರಿಸಿದ ನಂತರ ರೈತ ದಿನಾಚರಣೆ ಪ್ರಯುಕ್ತ ರೈತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರೈತ ಕೃಷಿಯಿಂದ ವಿಮುಖನಾದರೆ ನಮಗೆ ತಿನ್ನಲು ಏನೂ ಸಿಗುವುದಿಲ್ಲ ಎಂದರು. ಪ್ರತಿಯೊಬ್ಬರೂ ಊಟ ಮಾಡುವ ಮುನ್ನ ಅನ್ನದಾತರನ್ನು ಸ್ಮರಿಸಿಊಟಮಾಡಬೇಕು. ಅನ್ನದಾತರುಎಂತಹುದೇ ಸಂಕಷ್ಟ ಬಂದರೂ ಧೃತಿಗೆಡ ಬೇಡಿ, ಸಾಲ ತೀರಿಸಲಾಗಲಿಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗದಿರಿ. ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿರುವುದು ಸಾಲ ಪಡೆದ ರೈತನಲ್ಲ, ಸಾಲ ನೀಡಿದ ಬ್ಯಾಂಕ್ ನವರು ಎಂದು ಅವರು ಹೇಳಿದರು.
ನಾನು ಸಹಾ ರೈತನ ಮಗನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮೊಂದಿಗೆ ನಾನಿದ್ದೇನೆ. ದೇಶದ ಬೆನ್ನುಲುಬು ರೈತ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಾವು ತಿನ್ನುವ ದವಸ ಧಾನ್ಯಗಳು, ಹಣ್ಣು, ತರಕಾರಿ, ಹೈನುಗಾರಿಕಾ ಉತ್ಪನ್ನಗಳನ್ನೆಲ್ಲ ಉತ್ಪಾದಿಸುವುದು ಈ ರೈತರೆ.
ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ತುಂಬಾ ಹೆಗ್ಗಳಿಕೆಯ ವಿಷಯ ಎಂದರು.
ನಮ್ಮಲ್ಲಿ ನಡೆದ ರೈತ ಚಳವಳಿಗಳೂ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿವೆ. ಈ ಶ್ರಮ ಜೀವಿಗಳಾದ ರೈತರು ಎಂದಿಗೂ ಗೌರವಿಸಲ್ಪಡುವ ವ್ಯಕ್ತಿತ್ವಗಳೇ ಆಗಿರುತ್ತಾರೆ. ಇದಕ್ಕಾಗಿಯೇ ನಮ್ಮ ದೇಶದಲ್ಲಿ ಇವರಿಗಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದೆ. ಅದುವೇ ಡಿಸೆಂಬರ್ 23 . ಈ ದಿನವನ್ನು ದೇಶದೆಲ್ಲೆಡೆ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ ಎಂದರು.