Daily Story: ರಾಮುನ ಮುಖ ಸಣ್ಣದಾಗಿತ್ತು. ಆತ ತನ್ನ ಹೊಸ ಪೆನ್ನನ್ನು ‘ಕಳೆದುಕೊಂಡಿದ್ದ. ತನ್ನ ಚೀಲದಲ್ಲಿರುವ ಪುಸ್ತಕಗಳನ್ನೆಲ್ಲ ಹೊರಗೆ ತೆಗೆದು ನೋಡಿದ. ಶಾಲೆಯ ಕೋಣೆಯಲ್ಲೆಲ್ಲ ಸುತ್ತಾಡಿ ಹುಡುಕಿದ. ಎಲ್ಲೂ ಪೆನ್ನು ಕಾಣಿಸಲೇ ಇಲ್ಲ.
ರಾಮು ತನ್ನ ತಂದೆಯನ್ನು ಕಾಡಿ-ಬೇಡಿ ಪಡೆದ ಪ್ರೀತಿಯ ಪೆನ್ನು ಅದು. ಅದು ಎಲ್ಲೂ ಕಳೆಯಬಾರದು. ಬಹಳ ದಿನ ತನ್ನಲ್ಲೇ ಇರಬೇಕು ಎಂದೆಲ್ಲ ಯೋಚಿಸಿದ್ದ. ಆ ಬಗ್ಗೆ ತುಂಬ ಕಾಳಜಿಯನ್ನು ತೆಗೆದುಕೊಂಡಿದ್ದ. ಆದರೂ ಅದು ಕಳೆದು ಹೋಗಿತ್ತು.
ಮರುದಿನ ಶಾಲೆಗೆ ಬಂದಾಗಲೂ ಅದೇ ವಿಚಾರ ರಾಮುನನ್ನು ಕಾಡುತ್ತಿತ್ತು. ಅದೇ ವರ್ಗದ ಭೀಮುವಿನ ಕಿಸೆಯಲ್ಲಿ ತನ್ನಂತಹುದೇ ಒಂದು ಪೆನ್ನು ಇದ್ದದ್ದು ಕಂಡಿತು. ಕೂಡಲೇ ಭೀಮುವಿನ ಬಳಿ ಹೋಗಿ, ಆತನ ಕಿಸೆಯಿಂದ ಆ ಪೆನ್ನನ್ನು ಕಿತ್ತುಕೊಂಡ. ಹೌದು. ಅದು ತನ್ನದೇ ಪೆನ್ನು, ಹಾಗೆಂದು ಭೀಮುವಿಗೆ ಹೇಳಿಯೂ ಬಿಟ್ಟ.
ಭೀಮು ರಾಮುನ ಮಾತಿಗೆ ಒಪ್ಪಲಿಲ್ಲ. ‘ಅದು ನಿನ್ನದೇ ಎಂದು ಹೇಗೆ ಹೇಳುತ್ತಿ? ನಿನ್ನಂತಹ ಬೆನ್ನು ಬೇರೆಯವರಲ್ಲಿ ಇರಬಾರದೇನು?’ ಎಂದು ಕೇಳಿದ. ಅದಕ್ಕೆ ರಾಮು, ‘ಇದು ನನ್ನದೇ ಪೆನ್ನು. ಇದರ ಮುಚ್ಚಳದ ಮೇಲೆ ರಾಮು ಎಂದು ಬರೆದಿರುವೆ ನೋಡು’ ಎಂದು ತೋರಿಸಿದ.
‘ನಾನು ನಿನ್ನೆ ರವಿಯಿಂದ ಹಣ ಕೊಟ್ಟು ಇದನ್ನು ಕೊಂಡಿದ್ದೇನೆ. ನನಗೇನೂ ಬೇರೆಯವರ ಪೆನ್ನು ಕದಿಯುವ ಬುದ್ದಿ ಇಲ್ಲ.’ ಎಂದು ಭೀಮು ತನ್ನನ್ನು ಸಮರ್ಥಿಸಿಕೊಂಡ.
ಇಬ್ಬರೂ ನ್ಯಾಯಕ್ಕಾಗಿ ಮುಖ್ಯೋಪಾಧ್ಯಾಯರ ಬಳಿ ಹೋದರು. ಅವರು ಇಬ್ಬರ ಮಾತನ್ನು ಸಮಾಧಾನದಿಂದ ಕೇಳಿದರು. ಆಮೇಲೆ ‘ಭೀಮು ನೀನು ಈ ಪೆನ್ನನ್ನು ರವಿಯ ಬಳಿ ಯಾಕೆ ಕೊಂಡುಕೊಂಡೆ?’ ಎಂದು ಕೇಳಿದರು.
ಭೀಮು: ‘ನನಗೆ ಒಂದು ಪೆನ್ನು ಬೇಕಾಗಿತ್ತು. ರವಿ ಇದನ್ನು ಮಾರುತ್ತೇನೆ ಎಂದ. ನಾನು ಕೊಂಡುಕೊಂಡೆ.’
ಮುಖ್ಯೋಪಾಧ್ಯಾಯ: ಇದಕ್ಕೆ ಎಷ್ಟು ಹಣ ಕೊಟ್ಟೆ?
ಭೀಮು: ‘ಐದು ರೂಪಾಯಿ’
ಮುಖ್ಯೋಪಾಧ್ಯಾಯ: ‘ಅದು ಅಂಗಡಿಯಲ್ಲಿ ಸಿಗುತ್ತಿರಲ್ಲಿಲ್ಲವೇ?’
ಭೀಮು: ‘ಅಂಗಡಿಯಲ್ಲಿ ಇದರ ಬೆಲೆ ಹತ್ತು ರೂಪಾಯಿ’
ಮುಖ್ಯೋಪಾಧ್ಯಾಯ: ‘ಅಂದರೆ ಇದು ನಿನಗೆ ಅರ್ಧ ಬೆಲೆಯಲ್ಲಿ ಸಿಕ್ಕಂತಾಯಿತು!’
ಭೀಮು: ‘ಹೌದು ಸರ್’
ಮುಖ್ಯೋಪಾಧ್ಯಾಯ: ‘ಹಾಗಾದರೆ ರವಿ ಕಳ್ಳತನದಲ್ಲಿ ನೀನು ಪಾಲುದಾರ? ಪೂರ್ಣ ಬೆಲೆ ಕೊಟ್ಟ ರಾಮುಗೆ ಅದನ್ನು ಕೊಡು. ಕಳ್ಳತನ ಮಾಡಿದ ರವಿ ಮೊದಲ ಅಪರಾಧಿ. ಅದು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಖರೀದಿಸಿದ ನೀನು ಎರಡನೇಯ ಅಪರಾಧಿ. ಇಬ್ಬರೂ ಕಳ್ಳರೇ, ಕಾರಣ ಇಬ್ಬರೂ ದಂಡ ಕೊಡಬೇಕು.’ ಎಂದು ತೀರ್ಪಿತ್ತರು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)