Site icon Harithalekhani

CT Raviಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಮನವಿ, ನ್ಯಾಯಾಂಗ ತನಿಖೆಗೆ ಆರ್‌.ಅಶೋಕ ಆಗ್ರಹ

ಬೆಂಗಳೂರು: ವಿಧಾನಪರಿಷತ್‌ ಸದಸ್ಯ ಸಿಟಿ ರವಿ (CT Ravi) ಅವರಿಗೆ ರಕ್ಷಣೆ ನೀಡುವಂತೆ ಕೋರಿ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕೆಂಬುದು ನಮ್ಮ ಆಗ್ರಹ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ಶಾಸಕ ಸಿಟಿ ರವಿ ಅವರಿಗೆ ಮಾಡಿದ ಅಪಮಾನದ ಬಗ್ಗೆ ತಿಳಿಸಲಾಗಿದೆ.

ಸಿಟಿ ರವಿ ಅವರಿಗೆ ಮುಸ್ಲಿಂ ಉಗ್ರವಾದಿ ಹಾಗೂ ನಕ್ಸಲರಿಂದ ಬೆದರಿಕೆ ಇದೆ. ಹೀಗಿದ್ದರೂ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಅನುಮಾನ ತಂದಿದೆ.

ಒಬ್ಬ ಪೊಲೀಸ್‌ ಅಧಿಕಾರಿ ಸುರಕ್ಷತೆ ದೃಷ್ಟಿಯಿಂದ ಅವರನ್ನು ಗದ್ದೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಅಂದರೆ ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂದರ್ಥ. ಪೊಲೀಸ್‌ ಠಾಣೆ ಸುರಕ್ಷಿತವಲ್ಲ ಎಂದು ಈ ಸರ್ಕಾರ ಜನರಿಗೆ ತಿಳಿಸಿದೆ ಎಂದರು.

ಸಿಟಿ ರವಿ ಅವರಿಗೆ ಹೀಗಾದರೆ ಇನ್ನು ಸಾರ್ವಜನಿಕರ ಪಾಡೇನು ಎಂಬ ಪ್ರಶ್ನೆ ಮೂಡುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅದಕ್ಕಾಗಿ ರಾಜ್ಯಪಾಲರು ಸಂವಿಧಾನವನ್ನು ರಕ್ಷಣೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸಿಟಿ ರವಿ ಎಲ್ಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರಶ್ನಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಸುರಕ್ಷತೆಯ ಕಾರಣ ನೀಡುತ್ತಾರೆ. ಇದು ಬಫೂನ್‌ ಸರ್ಕಾರವಾಗಿದ್ದು, ಇಷ್ಟು ಕೆಟ್ಟದಾಗಿ ಯಾರೂ ಸರ್ಕಾರ ನಡೆಸಿಲ್ಲ. ಪೊಲೀಸ್‌ ಆಯುಕ್ತರಿಗೆ ನಿರಂತರವಾಗಿ ಫೋನ್‌ ಕರೆ ಬರುತ್ತಿತ್ತು. ಇವರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಕರೆ ಮಾಡುತ್ತಿದ್ದರೇ ಎಂಬುದು ಗೊತ್ತಾಗಬೇಕು. ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಯಾಗಿ ಬದಲಾಗಿದೆ. ಎಲ್ಲ ತನಿಖೆಯನ್ನು ಪೊಲೀಸರೇ ಮಾಡುತ್ತಾರೆ ಎಂದರೆ ಸಿಒಡಿಗೆ ಕೊಟ್ಟರೂ ಮತ್ತೊಬ್ಬರಿಗೆ ಕೊಟ್ಟರೂ ಒಂದೇ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗುತ್ತಿದೆ. ನ್ಯಾಯಾಂಗ ತನಿಖೆಯಲ್ಲಿ ಯಾವುದೇ ತೀರ್ಪು ಬಂದರೂ ಒಪ್ಪಿಕೊಳ್ಳುತ್ತೇವೆ ಎಂದರು.

Exit mobile version