ನಾಗಪುರ: ಕೊಲೆ ಮತ್ತು ಮಾದಕದ್ರವ್ಯ ಪ್ರಕರಣಗಳ ಪ್ರಮುಖ ಆರೋಪಿಯೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ಸಿನಿಮೀಯ ರೀತಿಯಲ್ಲಿ ಪುಷ್ಪ 2 (Pushpa 2) ಸಿನಿಮಾ ಸೆಕೆಂಡ್ ಷೋ ವೀಕ್ಷಿಸುತ್ತಿದ್ದ ವೇಳೆ ಬಂಧಿಸಿದ್ದಾರೆ.
ನಾಗಪುರದಲ್ಲಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಶನಿವಾರ ರಾತ್ರಿ ಪುಷ್ಪ 2 ಸಿನಿಮಾ ಸೆಕೆಂಡ್ ಷೋ ವೀಕ್ಷಿಸುತ್ತಿದ್ದ ಆರೋಪಿ ವಿಶಾಲ್ ಮೆಶ್ರಾಮ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.
ಕಿಕ್ಕಿರಿದಿದ್ದ ಚಿತ್ರಮಂದಿರದಲ್ಲಿ ಪುಷ್ಪಾ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಪೊಲೀಸರು ದಿಢೀರ್ ನುಗ್ಗಿಬಂದಿದ್ದು ಅಚ್ಚರಿ ಉಂಟು ಮಾಡಿದೆ.
10 ತಿಂಗಳಿಂದ ತಲೆಮರೆಸಿಕೊಂಡಿದ್ದ ಡ್ರಗ್ ಪೆಡ್ಲರ್ ವಿಶಾಲ್‌ನನ್ನು ಬಂಧಿಸಿ ಕರೆದೊಯ್ದ ಪ್ರಸಂಗವಂತೂ ಪ್ರೇಕ್ಷಕರಿಗೆ ಪುಷ್ಪಾ ಸಿನಿಮಾಗಿಂ ತಲೂ ರೋಚಕವಾಗಿ ಕಂಡಿದೆ. ಪುಷ್ಪ 2 ಸಿನಿಮಾ ನೋಡಲು ಭಾರೀ ಉತ್ಸಾಹದಿಂದ ಹೋಗಿದ್ದ ವಿಶಾಲ್‌ಗೆ ಸಿನಿಮಾ ಪ್ರೀತಿಯೇ ಕಷ್ಟ ತಂದಿಟ್ಟಿದೆ.
ಆರೋಪಿ ವಿಶಾಲ್ ವಿರುದ್ಧ ಸದ್ಯ 2 ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ 27 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ವಿಶಾಲ್ ಹಿಂಸೆಯ ಪ್ರವೃತ್ತಿಯವನೆಂದೇ ಕುಖ್ಯಾತನಾಗಿದ್ದ, ಪೊಲೀಸರ ಮೇಲೆಯೂ ದಾಳಿ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಕಣ್ಣಾವಲು ಮೂಲಕ ವಿಶಾಲ್ ಚಲನವಲನ ಗಮನಿಸುತ್ತಾ ಹಿಂಬಾಲಿಸುತ್ತಿದ್ದೆವು. ಆತ ಪುಷ್ಪಾ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದು ಖಚಿತ ವಾದ ಬಳಿಕವೇ ಸೆರೆಗೆ ಯೋಜನೆ ರೂಪಿಸಿದೆವು.
ಚಿತ್ರದ ಕ್ರೈಮ್ಯಾಕ್ಸ್ ವೀಕ್ಷಣೆಯಲ್ಲಿ ಮೈಮರೆತಿದ್ದ ವಿಶಾಲ್‌ನನ್ನು ಸುತ್ತುವರಿದು, ಪ್ರತಿರೋಧ ತೋರಿಸಲೂ ಅವಕಾಶವಿಲ್ಲದಂತೆ ಮಾಡಿ ಬಂಧಿಸಿದೆವು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬಂಧಿತ ವಿಶಾಲ್ ನನ್ನು ನಾಗಪುರ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.
ಗಾಂಜಾ ಮಾರಾಟ: ವ್ಯಕ್ತಿ ಬಂಧನ
ಬೆಂಗಳೂರು: ಮಹಾರಾಷ್ಟ್ರದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ನಿವಾಸಿ ಸೆಂದಿಲ್ ಕುಮಾರ್‌ನನ್ನು ಬಂಧಿಸಿ, 4.5 ಲಕ್ಷ ಮೌಲ್ಯದ 15.930 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.
ನಾಪತ್ತೆಯಾಗಿರುವ ಪ್ರಮುಖ ಆರೋಪಿ ಇಲಿಯಾಸ್ ನಗರದ ಅಸ್ಟರ್ ಪತ್ತೆಗೆ ಪೊಲೀಸರ ತನಿಖೆ ಮುಂದುವರಿದಿದೆ. ವಿಶ್ವನಗರದ ಸ್ಮಶಾನದ ಬಳಿ ಗಾಂಜಾ ಮಾರಾಟಕ್ಕೆ ಸೆಂಥಿಲ್ ಯತ್ನಿಸಿರುವ ಬಗ್ಗೆ ಖಚಿತ ಆಧರಿಸಿ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿತು.
ಸೆಂಥಿಲ್ ಎರಡು ವರ್ಷದ ಹಿಂದೆ ದರೋಡೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾಗ ಗಾಂಜಾ ಪೆಡ್ಲರ್ ಅಸ್ಟರ್ ಪರಿಚಯ ವಾಗಿತ್ತು. ಆತನ ಸೂಚನೆ ಮೇರೆಗೆ ಮಹಾರಾಷ್ಟ್ರದ ನಾಸಿಕ್‌ಗೆ ಬಸ್‌ನಲ್ಲಿ ತೆರಳಿ ಗಾಂಜಾ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.