ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರ ಕುರಿತು ಅಶ್ಲೀಲ ಪದ ಬಳಕೆ ಮಾಡಿದ್ದರ ಕುರಿತಂತೆ ವಿಧಾನಪರಿಷತ್ ಸದಸ್ಯ ಸಿಟಿ ರವಿಯ ವಿರುದ್ಧ ಕಾಂಗ್ರೆಸ್ಸಿನ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ವಾಗ್ದಾಳಿ ನಡೆಸಿದ್ದು, ಸಿಟಿ ರವಿ ಕೂಡ ತಾಯಿಯ ಗರ್ಭದಿಂದಲೇ ಹುಟ್ಟಿದ್ದಾರೆ. ಅವರೇನು ಕರ್ಣನ ರೀತಿ ಬೇರೆ ಇನ್ಯಾವುದೋ ರೀತಿಯಲ್ಲಿ ಹುಟ್ಟಿದ್ದಾರೋ ಏನೋ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸ್ಕೃತಿ ಬಗ್ಗೆ ಮಾತನಾಡುತ್ತಾ ಜನರ ಮುಂದೆ ಬರುವ ಬಿಜೆಪಿಗರಿಗೆ ಆ ಸಂಸ್ಕೃತಿ ಎಲ್ಲಿ ಹೋಯ್ತು? ಸಿಟಿ ರವಿ ನಡೆದುಕೊಂಡಿರುವ ರೀತಿ, ಪದೇ ಪದೇ ಹೆಣ್ಣು ಮಕ್ಕಳ ಬಗ್ಗೆ ಆಡಿರುವ ಮಾತು ಬಿಜೆಪಿಗೆ ಶೋಭೆ ತರುತ್ತದೆಯೇ? RSS ಹೇಳಿ ಕೊಟ್ಟಿರುವ ಸಂಸ್ಕೃತಿ ಇದೇನಾ..?
ಬಿಜೆಪಿಯವರು ಸಿಟಿ ರವಿಗೆ ಬೆಂಬಲ ಕೊಡುವುದು ಎಷ್ಟು ಸರಿ. ಸಿಟಿ ರವಿ ಏನೇನೋ ಹೇಳುತ್ತಾರೆ ಅವರು ಕ್ಷಮೆ ಕೇಳಬೇಕಿತ್ತು. ಅವರ ಮನೆಯಲ್ಲಿಯೂ ತಾಯಿ ಇದ್ದಾರೆ. ಮಕ್ಕಳಿದ್ದಾರೆ. ಅವರು ಕೂಡ ತಾಯಿ ಗರ್ಭದಿಂದಲೇ ಬಂದಿದ್ದಾರೆ.
ಮೌಲ್ಯಗಳು ಕುಸಿತ ಆಗುತ್ತಿವೆ. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಸಿಟಿ ರವಿ ಕರ್ಣನ ರೀತಿ ಬೇರೆ ಹೇಗೋ ಹುಟ್ಟಿದ್ದಾರೋ ಏನೋ? ಮೋದಿ ಅವರು ದೈವಾಂಶ ಸಂಭೂತ ಹುಟ್ಟಿ ಬಂದಿದ್ದೇನೆ ಎಂದು ಹೇಳಿದ್ದರು. ಅದೇ ರೀತಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಹುಟ್ಟಿ ಬಂದಿರಬೇಕು ಎಂದು ಕುಟುಕಿದರು.
ವಿಪಕ್ಷದ ನಾಯಕರು ಈ ರೀತಿಯ ನಡವಳಿಕೆ ತೋರಿಸುವ ಮೂಲಕ ಕರ್ನಾಟಕದ ಗೌರವ ಕಡಿಮೆ ಮಾಡಿದಂತೆ ಆಗುತ್ತಿದೆ. ಕನ್ನಡಿಗರು ಸುಸಂಸ್ಕೃತರು ಎನ್ನುವ ಭಾವನೆ ಹೋಗುತ್ತಿದೆ. ರಾಜ್ಯದಲ್ಲಿ ಒಂದಾದ ಮೇಲೆ ಒಂದು ಘಟನೆ ಆಗುತ್ತಲೇ ಇದೆ. ಮೌಲ್ಯಗಳು ಕುಸಿತ ಆಗುತ್ತಿದೆ ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ ಎಂದು ಹೇಳಿದರು.